ಧರಣಿ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ

MP Pratap Simha visits the sit-in site
Published on

ಮಡಿಕೇರಿ:

ವೇತನ ಪಾವತಿಗಾಗಿ ಆಗ್ರಹಿಸಿ ಕಳೆದ ವಾರದಿಂದ ಪ್ರಾರಂಭವಾಗಿ ಐದನೇ ದಿನ ಪೂರೈಸಿದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಮಂಗಳವಾರ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಕುಲಸಚಿವರ ಬಳಿ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಮಾತ್ರವಲ್ಲದೆ ಸಮಸ್ಯೆ ಇಲ್ಲಿಯೇ ಪರಿಹಾರವಾಗದಿದ್ದರೆ ರಾಜ್ಯಪಾಲರ ಬಳಿ ಮಾತನಾಡಲಾಗುವುದು. ಯಾವುದಕ್ಕೂ ಪರಿಹಾರ ದೊರೆಯದೇ ಹೋದರೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಭವನದ ಮುಂದೆ ಅತಿಥಿ ಉಪನ್ಯಾಕರ ಜತೆಯಲ್ಲಿ ತಾನು ಸಹ ಧರಣಿಯಲ್ಲಿ ಭಾಗವಹಿಸುವುದಾಗಿ ಹೇಳಿದರು. ಈವರೆಗೆ ತಾನು ಮೈಸೂರು ವಿವಿ ಹಾಗೂ ಕರ್ನಾಟಕ ಮುಕ್ತ ವಿವಿ ಹಲವು ಹಗರಣಗಳ ವಿರುದ್ಧ ಹೋರಾಟ ಕೈಗೊಂಡಿದ್ದೇನೆ. ಕೊಡಗಿನ ಅತಿಥಿ ಉಪನ್ಯಾಸಕರ ಯೋಗಕ್ಷೇಮ ಕಾಪಾಡುವುದು ತನ್ನ ಜವಾಬ್ದಾರಿ ಎಂದರು.

ಅತಿಥಿ ಉಪನ್ಯಾಸಕರ ಧರಣಿ ಬೆಂಬಲಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ಯ ಕಾಲೇಜಿಗೆ ಭೇಟಿ ನೀಡಿ ಅತಿಥಿ ಉಪನ್ಯಾಸಕರಿಗೆ ಬೆಂಬಲ ಸೂಚಿಸಿದರು. ವೇತನ ದೊರಕುವವರೆಗೂ ಈ ಹೋರಾಟವು ಮುಂದುವರೆಯುತ್ತದೆ ಎಂಬ ಒಮ್ಮತದ ತೀರ್ಮಾನವನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net