

ಮೈಸೂರು: ವಿಚಾರದ ಅರಿವಿಲ್ಲದೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವು ದನ್ನು ತಡೆಯಲು ಕೇಂದ್ರ ಸರ್ಕಾರ ಕಂಪ್ಯೂಟರ್ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಅಸಂಬದ್ಧ ಹೇಳಿಕೆಯು ರಾಜ್ಯಕ್ಕೆ ಆದ ಅವಮಾನ ಎಂದು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ದಲ್ಲಿ ಎಂತೆಂತಹ ಸಚಿವರು ಇದ್ದಾರೆ ಎಂದು ವ್ಯಂಗ್ಯವಾಡಿರುವ ಪ್ರತಾಪ್ ಸಿಂಹ, ಸತೀಶ್ ಜಾರಕಿಹೊಳಿಗೆ ಓರಿಯಂಟೇಷನ್ ಕಾರ್ಯಕ್ರಮದ ಅವಶ್ಯಕತೆ ಇದೆ. ಸಾರ್ವಜನಿಕವಾಗಿ ಏನು ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ, ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ ರಾಜ್ಯದ ಮರ್ಯಾದೆ ಹೋಗುತ್ತದೆ ಎಂದರು.
ಸಚಿವ ಎಂ.ಬಿ. ಪಾಟೀಲ್ ನನ್ನ ಬಗ್ಗೆ ಮಾತನಾಡುವುದಿಲ್ಲ ಎಂದರೆ ನಾನು ಸಹ ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರು ನಮ್ಮ ರಾಜ್ಯದ ನೀರಾವರಿ ಸಚಿವರು, ನಾನು ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರ ಬಗ್ಗೆ ಜನರು ಅಪಾರವಾದ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಕೆಲಸಗಳು ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂದು ಹೇಳಿದರು.
ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಅಕ್ಕಿ ಕೊಡುತ್ತಿಲ್ಲ ಎಂದು ಯಾರಾದರೂ ಬೊಬ್ಬೆ ಹಾಕುವುದನ್ನು ಕೇಳಿದ್ದೀರಾ? ಅಕ್ಕಿ ಬೇಕಾದರೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ. ಮಂಡಿ ತೆರೆದು ರಾಜ್ಯದಲ್ಲಿ ರೈತರಿಂದ ಭತ್ತ ಖರೀದಿಸಿ. ನಮ್ಮ ರೈತರು ರಾಜ್ಯದ ಜನತೆಗೆ ಬೇಕಾದಷ್ಟು ಭತ್ತ ಬೆಳೆದಿದ್ದಾರೆ. ಉಚಿತ ಅಕ್ಕಿ ನೀಡುವ ಭರವಸೆ ನೀಡುವಾಗ ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡು ಭರವಸೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಕ್ರೈಸ್ತರು ಕೇಳಿದ ಕೂಡಲೇ ಮತಾಂದರ ನಿಷೇಧ ಕಾಯ್ದೆ ಹಿಂಪಡೆಯುತ್ತೀರಾ, ಮುಸ್ಲಿಮರು ಕೇಳಿದ ಕೂಡಲೇ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೀರಾ, ಸಾಮಾನ್ಯ ಜನರು ವಿದ್ಯುತ್ ದರ ಕಡಿಮೆ ಮಾಡಿ ಎಂದು ಕೇಳಿಕೊಂಡರೆ ಆಗೋದಿಲ್ಲ ಅಂತೀರಾ, ನಿಮ್ಮದು ಜನ ವಿರೋಧಿ ಧೋರಣೆ ಎಂದು ಟೀಕಿಸಿದರು.
ಶಾಸಕ ಪ್ರದೀಪ್ ಈಶ್ವರ್ ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಆದಷ್ಟು ಬೇಗ ಮೊದಲ ಬಾರಿ ಗೆದ್ದಿರುವ ಶಾಸಕರು, ಹಿರಿಯ ಶಾಸಕರು ಹಾಗೂ ಏನೂ ಗೊತ್ತಿಲ್ಲದವರಿಗೆ ಒರಿಯಂಟೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು.