

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇತ್ತೀಚಿಗೆ ಮೈಸೂರಿಗೆ ಆಗಮಿಸಿದ ಸಂದರ್ಭ ದೇವೇಗೌಡರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ ಅವರ ಮುಂದೆ ಮಂಡಿಯೂರಿ ನಮನಸ್ಕರಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೇವೇಗೌಡರ ಮುಂದೆ ಮಂಡಿಯೂರಿ ನಮಸ್ಕರಿಸಲು ಕಾರಣವೇನು ಎಂಬ ಅಂಶವನ್ನು ಶನಿವಾರ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ತೆರೆದಿಟ್ಟರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಕಾಲಿಗೆ ನಮಸ್ಕರಿಸಿದ್ದಕ್ಕೆ ಮಾಧ್ಯಮದವರು ಕತೆ ಕಟ್ಟಬೇಡಿ. ನಾನು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಿರಿಯರೆಲ್ಲರ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ನಾನು ಮಲೆನಾಡಿನವನು, ನಮ್ಮಲ್ಲಿ ಹಿರಿಯರನ್ನು ಕಂಡಾಗ ಕಾಲಿಗೆ ನಮಸ್ಕರಿಸುವ ಸಂಪ್ರದಾಯ ಇದೆ ಎಂದರು.
ನೀರಾವರಿ ಯೋಜನೆ ಅನುಷ್ಠಾನದಲ್ಲಿ ಎಚ್.ಡಿ. ದೇವೇಗೌಡರು ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನೀರಾವರಿ ವಿಚಾರದಲ್ಲಿ ದೇವೇಗೌಡರಿಗೆ ಸರಿಸಾಟಿಯಾದ ಮತ್ತೊಬ್ಬ ವ್ಯಕ್ತಿ ರಾಜ್ಯದಲ್ಲಿ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ, ಅಂತಹ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.