

ಬೀರೂರು (ಕಡೂರು ತಾ.): ಚುನಾವಣೆಯಲ್ಲಿ ಜಯಗಳಿಸಿದ ನಂತರವೂ ಪಕ್ಷದಲ್ಲಿಯೇ ಇದ್ದು, ನಿಷ್ಠೆ ತೋರುವ ಕಾರ್ಯಕರ್ತರೇ ಜೆಡಿಎಸ್ಗೆ ಬಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟರು.
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಂಚಾಯಿತಿ ಚುನಾವಣೆಗಳಲ್ಲಿ ಒಂದೇ ಪಕ್ಷದಿಂದ ಹೆಚ್ಚು ಆಕಾಂಕ್ಷಿಗಳು ಸ್ಪರ್ಧೆಗೆ ಇಳಿಯದೆ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ನೀವೇ ಆಯ್ಕೆ ಮಾಡಿ ಕಣಕ್ಕಿಳಿಸುವುದು ಸೂಕ್ತ. ಆಗ ಪಕ್ಷದ ಮತ್ತು ಕಾರ್ಯಕರ್ತರ ಬೆಂಬಲವೂ ದೊರಕಿ 49 ಗ್ರಾಪಂಗಳ ಪೈಕಿ ಕನಿಷ್ಠ 38 ಪಂಚಾಯಿತಿಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದರು.
ಮಾಜಿ ಶಾಸಕ ವೈಎಸ್ವಿ ದತ್ತ ಮಾತನಾಡಿ, ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ಆಗಬೇಕು. ಆದರೆ ಇಂದು ವ್ಯವಸ್ಥೆ ಹದಗೆಟ್ಟಿದೆ. ಒಳ್ಳೆಯವರನ್ನು ಗುರುತಿಸಿ ಅವರಿಗೆ ನೈತಿಕ ಬಲ ತುಂಬುವುದು ನಮ್ಮ ಕರ್ತವ್ಯ. ಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಮೀಣ ಜನತೆಗೆ ಅಧಿಕಾರ ನೀಡಿದ ಏಕೈಕ ಪಕ್ಷ ಜೆಡಿಎಸ್. ಬೂತ್ ಮಟ್ಟದ ಕಾರ್ಯಕರ್ತರನ್ನು ಬಲಗೊಳಿಸಲು ಗ್ರಾಪಂ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಬೇಕಿದೆ. ಅವರಿಂದಲೇ ಪಕ್ಷಕ್ಕೆ ಶಕ್ತಿ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಷ್ಟೇ ಅಭಿಮಾನವನ್ನು ಪ್ರಜ್ವಲ್ ರೇವಣ್ಣ ಕೂಡ ಕಡೂರು ಮತ್ತು ಕಾರ್ಯಕರ್ತರ ಬಗ್ಗೆ ಹೊಂದಿರುವುದು ನಮಗೆ ಸ್ಪೂರ್ತಿ ತುಂಬಿದೆ. ಅದೇ ಉತ್ಸಾಹದಿಂದಲೇ ಚುನಾವಣೆ ಎದುರಿಸೋಣ. ಗೊಂದಲಗಳಿಲ್ಲದೆ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸೋಣ. ಚುನಾವಣೆಯಲ್ಲಿ ಗೆದ್ದ ಬಳಿಕ ಪಕ್ಷ ತೊರೆದು ಆಘಾತ ನೀಡಬೇಡಿ. ನಮ್ಮೊಂದಿಗಿದ್ದು ಪಕ್ಷಕ್ಕೆ ಬಲ ತುಂಬಿ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯ ಮೋಹನ್ಕುಮಾರ್, ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ರೇಣುಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಟಿ.ಗಂಗಾಧರ ನಾಯ್ಕ, ಬೀರೂರು ಘಟಕದ ಅಧ್ಯಕ್ಷ ಬಾವಿಮನೆ ಮಧು, ಅಲ್ಪಸಂಖ್ಯಾತರ ಘಟಕ ತಾಲೂಕು ಅಧ್ಯಕ್ಷ ಮುಬಾರಕ್, ಜಗದೀಶ್, ನಿಂಗಪ್ಪ, ರಂಗಪ್ಪ, ಗೋವಿಂದಸ್ವಾಮಿ ಇದ್ದರು.