

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ನಿತ್ಯಾನಂದ ಇರುವ ಜಾಗಕ್ಕೆ ಸೇರಲು ಪಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ನೀರವ್ ಮೋದಿ, ವಿಜಯ ಮಲ್ಯ ಯಾರನ್ನೂ ಬಿಜೆಪಿ ಸರ್ಕಾರ ಭಾರತಕ್ಕೆ ಕರೆ ತರಲಿಲ್ಲ. ಪ್ರಜ್ವಲ್ ರೇವಣ್ಣನ ವಿಚಾರದಲ್ಲೂ ಇದೇ ಆಗಲಿದೆ. ಬಿಡದಿಯ ನಿತ್ಯಾನಂದ ಪ್ರಕರಣ ಏನಾಯಿತು ಎಲ್ಲರಿಗೂ ತಿಳಿದಿದೆ. ನನಗಿರುವ ಮಾಹಿತಿ ಪ್ರಕಾರ ನಿತ್ಯಾನಂದ ಇರುವ ಜಾಗಕ್ಕೆ ಸೇರಲು ಪ್ರಜ್ವಲ್ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸಂಬಂಧ ಜೆಡಿಎಸ್ ವತಿಯಿಂದ ರಾಜ್ಯಪಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಎರಡನೇ ಬಾರಿ ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ. ನಿಮ್ಮ ತಂದೆಯನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.