ಸುರಂಗ ಯೋಜನೆ ಪುನರ್‌ಪರಿಶೀಲನೆಗೆ ಸಂಸದ ಪಿ.ಸಿ.ಮೋಹನ್ ಆಗ್ರಹ

tunnel pcm
Published on

ಬೆಂಗಳೂರು: ಮಹಾನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸಲಿದೆ ಎನ್ನಲಾದ ಉದ್ದೇಶಿತ ಸುರಂಗ ಯೋಜನೆಯು ಬೆಂಗಳೂರಿನ ಮೊಬಿಲಿಟಿ ಹಾಗೂ ಪರಿಸರಾತ್ಮಕ ಸವಾಲುಗಳಿಗೆ ಮತ್ತಷ್ಟು ಘಾಸಿ ಮಾಡಲಿರುವ ಕಾರಣ ಟನಲ್ ಪ್ರಾಜೆಕ್ಟ್ ಅನ್ನು ಮರುಪರಿಶೀಲಿಸಬೇಕು ಎಂದು ಸಂಸದ ಪಿ.ಸಿ.ಮೋಹನ್ ಆಗ್ರಹಿಸಿದ್ದಾರೆ.

ಈ ಸಂಬಂಧ ಸಂಸದರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ಅರೆಬರೆ ಅಂಶಗಳನ್ನಾಧರಿಸಿ ಸಿದ್ಧಪಡಿಸಿರುವ ಸುರಂಗ ಯೋಜನೆ ಜಾರಿಯಿಂದ ನಾಗರಿಕರಿಗೆ ಅನುಕೂಲಕ್ಕಿಂತ ಅನನುಕೂಲ ಉಂಟಾಗಲಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ನಿರ್ಮಿಸಲು ಉದ್ದೇಶಿಸಿರುವ 18 ಕಿ.ಮೀ. ಉದ್ದದ ಸುರಂಗ ಮಾರ್ಗವು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಆಕ್ಷೇಪಿಸಿದ್ದಾರೆ.

ಟನಲ್ ಪ್ರಾಜೆಕ್ಟ್‌ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು 12-18 ತಿಂಗಳು ಬೇಕಿದೆ. ಆದರೆ, ಕೇವಲ ಮೂರೇ ತಿಂಗಳಲ್ಲಿ 30 ಮೀ. ಆಳದಲ್ಲಿ ಟನಲ್ ರೂಪಿಸುವ ವರದಿ ತಯಾರಿಕೆಯ ಆತುರದಿಂದಾಗಿ ಗುಣಮಟ್ಟ ಹಾಗೂ ಕರಾರುವಕ್ಕಾದ ಯೋಜನಾ ರೂಪುರೇಶೆಗೆ ಒತ್ತು ನೀಡಿದಂತಿಲ್ಲ. ಪ್ರತಿ ಕಿ.ಮೀ. 20 ಕಡೆ ಮಣ್ಣು ಪರೀಕ್ಷೆ, ಸುರಕ್ಷತೆ, ಕಾರ್ಯಸಾಧ್ಯತೆ ಹಾಗೂ ಯೋಜನಾ ಸಕಾರ ಬಗ್ಗೆ ಅನುಮಾನ ಮೂಡಿಸಿದೆ. ಟನಲ್ ಬೋರಿಂಗ್ ಯಂತ್ರದ ಆಯ್ಕೆ, ನೆಲದಾಳದಲ್ಲಿ ಕಲ್ಲು, ಮಣ್ಣು ಹಾಗೂ ನೀರಿನ ಹರಿವಿನ ಬಗ್ಗೆ ನಿಖರತೆ ಇಲ್ಲದೆ ಕಾಮಗಾರಿ ಕೈಗೊಂಡಲ್ಲಿ ಟನಲ್ ಕುಸಿದುಬೀಳುವ ಅಪಾಯ ಇರುವುದರಿಂದ ಯೋಜನೆ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೊಬಿಲಿಟಿ ಪ್ಲಾನ್‌ಗೆ ಧಕ್ಕೆ ಸಾಧ್ಯತೆ:

ಮಹಾನಗರಕ್ಕೆ ರೂಪಿಸಿರುವ ಸಮಗ್ರ ಮೊಬಿಲಿಟಿ ಯೋಜನೆಯನ್ನು (ಸಿಎಂಪಿ) ಟನಲ್ ಪ್ರಾಜೆಕ್ಟ್ ಹಾದಿ ತಪ್ಪಿಸುವಂತಿದೆ. ಹಾಲಿ ಪ್ರಗತಿಯಲ್ಲಿರುವ ಮೆಟ್ರೋ ರೈಲಿನ ಹಂತ 3ಎ ಮಾರ್ಗವು ಹೆಬ್ಬಾಳ-ಸಿಲ್ಕ್‌ಬೋರ್ಡ್ ಸಂಪರ್ಕಿಸಲಿದೆ. ಜತೆಗೆ ನಿಯೋ ಬಸ್ ಸಿಸ್ಟಮ್ ಜಾರಿಗೆ 714 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಕೂಡ ಮೂಲಸೌಕರ್ಯ ಯೋಜನೆಗಳಾದ ಮೆಟ್ರೋ ರೈಲು, ಬಿಆರ್‌ಟಿಗೆ ಆದ್ಯತೆ ನೀಡಿದ್ದರೂ, ನಗರದಲ್ಲಿರುವ ಶೇ.75 ದ್ವಿಚಕ್ರವಾಹನ ಸವಾರರಿಗೆ ಟನಲ್ ಮಾರ್ಗವನ್ನು ದೂರು ಇಡುತ್ತಿರುವುದು ಯೋಜನೆಯ ಅಗತ್ಯತೆಯನ್ನು ಪ್ರಶ್ನಿಸುವಂತಾಗಿದೆ. ಮೇಲಾಗಿ ಟನಲ್ ರಸ್ತೆ ನಿರ್ಮಿಸಿದ ಬಳಿಕ ಪ್ರತಿ ಕಿ.ಮೀ.ಗೆ 16 ರೂ.ಗಿಂತ ಹೆಚ್ಚು ಮೊತ್ತದ ಟೋಲ್ ಸಂಗ್ರಹ ಬೆಂಗಳೂರಿಗರಿಗೆ ಹೊರೆಯಾಗಲಿದೆ ಎಂದು ಪಿ.ಸಿ.ಮೋಹನ್ ದೂರಿದ್ದಾರೆ.

ಬೆಂಗಳೂರು ನಗರಕ್ಕೆ ಟನಲ್ ಯೋಜನೆಗಿಂತ ಸಮೂಹ ಸಾರಿಗೆ ಸೂಕ್ತ. ಮೆಟ್ರೋ, ಉಪನಗರ ರೈಲು, ಬಿಎಂಟಿಸಿ ಬಸ್ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸದೆ ತೆರಿಗೆ ಹಣ ಪೋಲು ಮಾಡುವ ಸುರಂಗ ಯೋಜನೆಯನ್ನು ಮುನ್ನೆಲೆಗೆ ತಂದು ಅರ್ಧದಲ್ಲೇ ಕೈಬಿಡುವ ಪ್ರಾಜೆಕ್ಟ್ ಆಗಿಸುವುದೇ ಈಗಿನ ಸರ್ಕಾರದ ಉದ್ದೇಶವಾದಂತಿದೆ. ಈ ಸಂಬಂಧ ಶೀಘ್ರವೇ ಸಿಎಂ ಭೇಟಿಯಾಗಿ ಚರ್ಚಿಸುವೆ.

- ಪಿ.ಸಿ.ಮೋಹನ್, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net