

ಹೊಳೆನರಸೀಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಕಾಲ್ನಡಿಗೆಯಲ್ಲಿ ಸಾಗಿ ಗಮನ ಸೆಳೆದರು. ಯುವಕರೊಂದಿಗೆ ಜತೆಗೂಡಿ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕುವ ಮೂಲಕ ಪ್ರೋತ್ಸಾಹಿಸಿದರು. 1 ಕಿಮೀ ದೂರ ಮೆರವಣಿಗೆಯಲ್ಲಿ ಉರಿ ಬಿಸಿಲಿನ ನಡುವೆ ಸಾಗಿ ಬಂದವರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದರು.
ನಂತರ ಮಾತನಾಡಿದ ಅವರು, ಬಡವರ ಹಾಗೂ ಶೋಷಿತ ವರ್ಗದವರ ಏಳಿಗೆ ಆಗಬೇಕೆನ್ನುವುದೇ ಅಂಬೇಡ್ಕರ್ ಕನಸಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಸಮ ಸಮಾಜದ ನಿರ್ಮಾಣವೇ ಸಂವಿಧಾನದ ಆಶಯವಾಗಿದೆ. ಸಂವಿಧಾನದ ರಕ್ಷಣೆ,ಪಾಲನೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಮತ್ತು ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.