

ಕೋಲಾರ : ಕ್ರೀಡೆಗಳಲ್ಲಿ ಆಸಕ್ತಿ ಇರುವ ಮಕ್ಕಳನ್ನು ಗುರುತಿಸಿ ಪಟ್ಟಿ ನೀಡಿದರೆ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ, ಸೌಲಭ್ಯ ಕಲ್ಪಿಸುವ ಜತೆಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ತೆರೆದು ಅನುಭವಿ ತರಬೇತುದಾರರನ್ನು ನೇಮಿಸಲು ಚಿಂತನೆ ನಡೆಸಿರುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಒಳಾಂಗಣ ಮಿನಿ ಕ್ರೀಡಾಂಗಣದಲ್ಲಿ ಭಾನುವಾರ ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಸಂಘಗಳು, ಹಿರಿಯ ಕ್ರೀಡಾಪಟುಗಳು ಹಾಗೂ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಜಯಸಿದ ಕ್ರೀಡಾಪಟುಗಳೊಂದಿಗೆ ಸಂವಾದ, ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಕ್ರೀಡಾಪಟುಗಳಿಗೆ ಬೇಕಾಗಿರುವ ಸಿಂಥೆಟಿಕ್ ಟ್ರ್ಯಾಕ್ ಕಲ್ಪಿಸಲು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಜತೆ ಚರ್ಚಿಸಿರುವುದಾಗಿ ತಿಳಿಸಿದರು.
135 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಒಲಿಂಪಿಕ್‌ನಲ್ಲಿ 35 ಪದಕ ಗೆಲ್ಲಲು ಆಗುತ್ತಿಲ್ಲ. ಪ್ಯಾರಾ ಒಲಿಂಪಿಕ್‌ನಲ್ಲೇ ಅತಿ ಹೆಚ್ಚು ಪದಕಗಳನ್ನು ಭಾರತ ಗೆದ್ದಿದೆ. ಅಂಗವಿಕಲರೇ ಈ ಸಾಧನೆ ಮಾಡಿರುವಾಗ ಎಲ್ಲ ಚೆನ್ನಾಗಿರುವವರು ಏಕೆ ಸಾಧನೆ ಮಾಡಲಾಗುತ್ತಿಲ್ಲ. ಒಲಿಂಪಿಕ್‌ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಬೇಕೆಂಬುದು ನನ್ನ ಕನಸು ಎಂದರು.
ಕ್ರೀಡಾಪಟುಗಳನ್ನು ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮೂಲ. ಪ್ರತಿ ತಾಲೂಕಿನಲ್ಲಿ ಎಷ್ಟು ಮಕ್ಕಳು ಕ್ರೀಡೆಯಲ್ಲಿ ಆಸಕ್ತರಾಗಿದ್ದಾರೆ ಎಂಬ ಪಟ್ಟಿ ಸಿದ್ಧಪಡಿಸಿ, ಪಾಲಕರ ೆನ್ ನಂಬರ್ ಕೊಟ್ಟರೆ ಅವರನ್ನು ಸಂಪರ್ಕಿಸುತ್ತೇವೆ. ಕ್ರೀಡಾಕೂಟ ಏರ್ಪಡಿಸಿ ಅರ್ಹರನ್ನು ಆಯ್ಕೆ ಮಾಡಿಕೊಂಡು ತರಬೇತಿ ಕೊಟ್ಟು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕ್ರೀಡಾ ಇಲಾಖೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಕ್ರೀಡಾ ಸಚಿವರ ಸಹಕಾರ ಪಡೆದುಕೊಂಡು ಅಗತ್ಯ ಸೌಲಭ್ಯ ಕಲ್ಪಿಸಲು ಬದ್ಧ. ಕನಿಷ್ಠ 500 ಮಕ್ಕಳನ್ನು ಗುರುತಿಸಿದರೆ ಸುಸಜ್ಜಿತವಾದ ಕ್ರೀಡಾ ಹಾಸ್ಟೆಲ್ ತೆರೆದು ಉತ್ತಮ ತರಬೇತಿ ಕೊಡಿಸಲು ಸಾಧ್ಯವಾಗುತ್ತದೆ ಎಂದರು.
ನರಸಾಪುರದ ಕೆರೆಯಲ್ಲಿ ವಾಟರ್ ಸ್ಪೋಟ್ಸ್ ಕೈಗೊಳ್ಳಲು ಸೂಕ್ತ ವಾತಾವರಣವಿದೆ. ಕೆಜಿಎ್ನ ಬಿಜಿಎಂಎಲ್ ಕ್ರೀಡಾಂಗಣವನ್ನು ಕ್ರೀಡಾಭ್ಯಾಸಕ್ಕೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಮುಂದಿನ ಅವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ವೈಟಲ್ ಪ್ರೊ ಸ್ಪೋರ್ಟ್ಸ್ ಸೊಸೈಟಿ ಸಿಇಒ ಪ್ರದೀಪ್ ನಾಯ್ಡು ಮಾತನಾಡಿ, ಸಂಸದರ ಸೂಚನೆಯಂತೆ ಜಿಲ್ಲೆಯಲ್ಲಿ ಕ್ರೀಡಾಪಟುಗಳನ್ನು ಗುರುತಿಸಿ ಸ್ಪೋರ್ಟ್ಸ್ ಸೈನ್ಸ್ ತರಬೇತಿ ನೀಡುತ್ತಿದ್ದೇವೆ. ಯಾವ ಕ್ರೀಡೆಗೆ ಸಮರ್ಥರು ಎಂಬುದನ್ನು ತಿಳಿಯಲು ಆಧುನಿಕ ತಂತ್ರಜ್ಞಾನ ಬಳಸಿ ವೌಲ್ಯಮಾಪನ ಮಾಡಲಾಗುತ್ತಿದೆ. ಆರ್ಮಿ, ನೇವಿಯ ನೇಮಕಾತಿಗೆ ಪೂರ್ವ ತರಬೇತಿ ನೀಡಿ ಜಿಲ್ಲೆಯ 28 ಮಂದಿ ಭಾರತೀಯ ಸೇನೆ ಮತ್ತು ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಹೊಳಲಿಯಲ್ಲಿ ಕರ್ನಾಟಕ ಕ್ರಿಕೆಟ್ ಅಸೊಸಿಯೇಷನ್‌ನಿಂದ ನಿರ್ಮಾಣಗೊಳ್ಳಲಿರುವ ಕ್ರೀಡಾಂಗಣಕ್ಕೆ ಶೀಘ್ರವೇ ಭೂಮಿಪೂಜೆ ನೆರವೇರಲಿದೆ ಎಂದು ಹೇಳಿದರು. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ್, ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ದಯಾನಂದ್, ವೈಟಲ್ ಪ್ರೊ ಸ್ಪೊರ್ಟ್ಸ್ ಸೊಸೈಟಿ ಉಪಾಧ್ಯಕ್ಷ ಪಾರ್ಥಿಭಾನ್, ಪ್ಯಾರಾ ಒಲಿಂಪಿಕ್ ಸಮಿತಿ ಸಂಸ್ಥಾಪಕ, ಹಾಲಿ ಖಜಾಂಚಿ ಮಹದೇವ್, ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಉಳ್ಳಾಗಡ್ಡಿ, ಪ್ಯಾರಾ ಒಲಿಂಪಿಕ್ ಕ್ರೀಡಾಪಟು ನಾಗೇಶ್, ಹಿರಿಯ ಕ್ರೀಡಾಪಟು ಹಾಬಿ ರಮೇಶ್, ಅಂಚೆ ಅಶ್ವತ್ಥ್, ಶ್ರೀನಿವಾಸ್, ಪುರುಷೋತ್ತಮ್, ಬಿಇಒ ರಾಮಕೃಷ್ಣಪ್ಪ, ಶಿಕ್ಷಣ ಇಲಾಖೆಯ ಆರ್.ಶ್ರೀನಿವಾಸನ್ ಇತರರು ಇದ್ದರು.