ಸಂಸದ, ಶಾಸಕರಿಂದ ಅಡಿಕೆ ಬೆಳೆಗಾರರ ನಿರ್ಲಕ್ಷ್ಯ

bhr 1 prakash
Published on

ಬಾಳೆಹೊನ್ನೂರು: ಈ ಬಾರಿ ಸುರಿದ ಬಾರಿ ಮಳೆಯಿಂದಾಗಿ ಅಡಕೆ ಬೆಳೆಗೆ ಇನ್ನಿಲ್ಲದ ಕೊಳೆ ರೋಗ ಕಾಣಿಸಿಕೊಂಡಿದ್ದು, ಜಿಲ್ಲೆಯ ಬಹುತೇಕ ಕಡೆ ಶೇ.50ಕ್ಕೂ ಅಧಿಕ ಫಸಲು ನಷ್ಟವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಬೇಕಿದ್ದ ಸರ್ಕಾರ, ಜಿಲ್ಲೆಯ ಶಾಸಕರು, ಸಂಸದರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಆರೋಪಿಸಿದ್ದಾರೆ. ಕಳೆದ ಏಪ್ರಿಲ್‌ನಿಂದ ಆಕ್ಟೋಬರ್‌ವರೆಗೂ ಮಳೆ ಮುಂದುವರಿದಿದ್ದರಿಂದ ಅಡಕೆಗೆ ಎಲೆಚುಕ್ಕಿ ರೋಗ ಹರಡಿದೆ. ಕೊಳೆ ರೋಗದಿಂದ ಫಸಲು ತುಂಬಿದ್ದ ಕೊನೆಗಳು ಬರಿದಾಗಿದೆ. ಹೆಚ್ಚು ಮಳೆ ಬೀಳುವ ಬಸರೀಕಟ್ಟೆ, ಹೆದ್ಸೆ ಮುಂತಾದ ಕಡೆಯ ತೋಟಗಳಲ್ಲಿ ಅಡಕೆ ಮರದಲ್ಲಿ ಕೊನೆಗಳೇ ಇಲ್ಲದಂತಾಗಿದೆ. ಅಡಕೆಗೆ ಉತ್ತಮ ಧಾರಣೆ ಇದ್ದರೂ ಫಸಲು ಇಲ್ಲದೆ ನಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಎರಡು ವರ್ಷದ ಹಿಂದೆ ಸಂಘಟನೆ ವತಿಯಿಂದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರಿಂದ 43ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಕೈಗೊಂಡ ಸಂಶೋಧನೆ, ಫಲಿತಾಂಶದ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿಲ್ಲ. ಪರಿಣಾಮ ರೈತರು ವಿಜ್ಞಾನಿಗಳ ಮೇಲಿಟ್ಟಿದ್ದ ಭರವಸೆ ಕಳೆದುಕೊಂಡಿದ್ದಾರೆ. ಶಾಸಕ ರಾಜೇಗೌಡರ ಮೂಲಕ ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಗಂಭೀರತೆ ಕುರಿತು ಚರ್ಚಿಸಲು ಕಳೆದ ಎರಡು ವರ್ಷದಿಂದ ಪ್ರಯತ್ನಿಸಿದರೂ ಶಾಸಕರು ಸ್ಪಂದಿಸದೆ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ ಎಲೆಚುಕ್ಕಿ ರೋಗದ ರೈತರಿಗೆ ಪರಿಹಾರ ವಿತರಿಸಲು 60 ಕೋಟಿ ರೂ.ಬಿಡುಗಡೆ ಮಾಡಿದ್ದರೂ ರೈತರಿಗೆ ಹಂಚಿದ ಬಗ್ಗೆ ಮಾಹಿತಿ ಇಲ್ಲ. ಕಳೆದ ವರ್ಷ ಕೂಡ ಸರ್ಕಾರ ಅತಿವೃಷ್ಟಿಗೆ ಯಾವುದೇ ಪರಿಹಾರ ನೀಡದೆ ಕಡೆಗಣಿಸಿದೆ. ತಕ್ಷಣ ಜಿಲ್ಲೆಯ ಶಾಸಕರು ತೋಟಗಾರಿಕೆ ಸಚಿವರ ಗಮನ ಸೆಳೆದು ರೈತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net