

ಕಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಶಾಸಕರು ತಾಲೂಕಿನ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಹೇಳಿದರು.
ಸಿಂಗಟಗೆರೆ ಗ್ರಾಮದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ ಕುರಿತು ಮನೆ ಮನೆ ಮಹಾ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ನೆರೆಹಾವಳಿಯಿಂದ ಹಾನಿಯಾದ ರಸ್ತೆಗಳು, ಗ್ರಾಮ ಸಡಕ್ ಯೋಜನೆ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಚಿಕ್ಕನಾಯಕನಹಳ್ಳಿ ಸಮೀಪ ಅಂತರ್ಜಲ ವೃದ್ಧಿಗಾಗಿ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ತಾಲೂಕಿಗೆ ಎರಡು ಮುರಾರ್ಜಿ ವಸತಿ ಶಾಲೆ ಮಂಜೂರಾಗಿದೆ. ಸಿಂಗಟಗೆರೆ ಮುರಾರ್ಜಿ ಶಾಲೆಗೆ ಬಿ.ಮಲ್ಲೇನಹಳ್ಳಿ ಸಮೀಪ 8 ಎಕರೆ ಜಮೀನು ಮತ್ತು ಪಂಚನಹಳ್ಳಿ ಮುರಾರ್ಜಿ ಶಾಲೆಗೆ 4 ಎಕರೆ ಜಮೀನು ಮಂಜೂರಾತಿ ಪಡೆದು ಟೆಂಡರ್ ಹಂತದಲ್ಲಿದೆ. ಎರಡೂ ಶಾಲೆಗಳಿಗೆ ತಲಾ 18.50 ಕೋಟಿ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಕಡೂರು ಮತ್ತು ಬೀರೂರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲು 2 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಮುಸ್ಲಾಪುರದ ಹಟ್ಟಿಯಿಂದ ಮದಗದ ಕೆರೆ ಏರಿವರೆಗೂ ಕಾಂಕ್ರೀಟ್ ರಸ್ತೆ ನಿರ್ವಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.