

ವಿಜಯವಾಣಿ ಸುದ್ದಿಜಾಲ ಉಡುಪಿ
ಡಾ. ಸರೋಜಿನಿ ಮಹಿಷಿ ಅವರ ವರದಿಯ ಶಿಫಾರಸಿನಂತೆ ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಕೈಗಾರಿಕೆಗಳು, ಬಹುರಾಷ್ಟ್ರೀಯ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70 ಆದ್ಯತೆ ನೀಡಬೇಕಿರುವುದು ಕಡ್ಡಾಯ. ಹೀಗಾಗಿ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಾಗಿ ದುಡಿಯಲು ಸ್ಥಳೀಯರಿಗೇ ಮೊದಲ ಅವಕಾಶ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.
ನಿರುದ್ಯೋಗಿಗಳು ಹಲವಾರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಸ್ಥಳೀಯರಿಗೇ ಆದ್ಯತೆ ನೀಡಬೇಕೆಂಬುದೂ ಪ್ರಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿ 37 ಸಣ್ಣ ಕೈಗಾರಿಕಾ ಘಟಕ, 45 ಮಧ್ಯಮ, 7 ಬೃಹತ್ ಕೈಗಾರಿಕಾ ಕಾರ್ಖಾನೆಗಳಿವೆ. ಯುಪಿಸಿಎಲ್, ಕೊಚ್ಚಿನ್ ಶಿಪ್ಯಾರ್ಡ್, ಓಷನ್ ಪರ್ಲ್ ಮುಂತಾದ ಸಂಸ್ಥೆಗಳು ಸ್ಥಳೀಯ ಕೆಲಸಗಾರರಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ನಾಮಫಲಕಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಜಿಲ್ಲಾಡಳಿತವು ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ನೆರವು ನೀಡಲಿದೆ. ಸಂಸದರ ಸೂಚನೆಯಂತೆ ತಾವುಗಳು ಸ್ಥಳೀಯರಿಗೇ ಹೆಚ್ಚು ಉದ್ಯೋಗ ನೀಡುವ ಬಗ್ಗೆ ಕ್ರಮವಹಿಸಬೇಕು ಎಂದರು.
ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿ ನಾಗರಾಜ ನಾಯಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.