

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆಯಿಂದ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169-ಎ ಕಾಮಗಾರಿಯ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ವಿರುದ್ಧ ಪ್ರತಿಭಟಿಸಿದವರಿಗೆ, ಶವ ಯಾತ್ರೆ ಮಾಡಿದವರಿಗೆ ಹಾಗೂ ಟೀಕಾಕಾರರಿಗೆ ಹೆದ್ದಾರಿ ಕಾಮಗಾರಿಯ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಆದಿಉಡುಪಿ ಭಾಗದಲ್ಲಿ ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು, 135 ಭೂ ಮಾಲೀಕರಿಗೆ 24.86 ಕೋಟಿ ರೂ. ಪರಿಹಾರ ಪಾವತಿಯಾಗಿದೆ. ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗೆ ತಕರಾರು ಇರುವಲ್ಲಿ ಅಧಿಕಾರಿಗಳೊಂದಿಗೆ ಹಲವು ಬಾರಿ ಭೇಟಿ ಕೊಟ್ಟು ಕಾಮಗಾರಿಗೆ ವೇಗ ಹೆಚ್ಚಿಸಿಲು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸುಮಾರು 90ರಷ್ಟು ಸಣ್ಣ ಸಣ್ಣ ಭೂ ಭಾಗಗಳ ಸರ್ವೇ ಮುಗಿಸಿ ಹಣ ಪಾವತಿಸಲು ಅಧಿಕಾರಿಗಳ ಸಭೆ ಕರೆದು ಪ್ರಗತಿ ಗಮನಿಸಿದ್ದೇನೆ. ಸರ್ವೇ ಅಧಿಕಾರಿಗಳ ಮೂಲಕ 3ಡಿ ವರದಿ ಸಲ್ಲಿಸಲು ಸೂಚಿಸಿದ್ದು, ಬೆಂಗಳೂರಿನ ಆರ್ಒ ಕಚೇರಿಗೂ ಭೇಟಿ ಕೊಟ್ಟು ಭೂಮಾಲೀಕರಿಗೆ ಹಣ
ಪಾವತಿ ಬಗ್ಗೆ ಚರ್ಚಿಸಿದ್ದೇನೆ. ಈವರೆಗೆ ದಾಖಲೆಗಳನ್ನೇ ನೀಡದಿರುವ 70 ಭೂಮಾಲೀಕರನ್ನು ಸಂಪರ್ಕಿಸಿ, ಕೋರ್ಟ್ ಮೂಲಕ ಠೇವಣಿ ಇಟ್ಟು ಕಾಮಗಾರಿ ಮುನ್ನಡೆಸಲು ಪ್ರಯತ್ನಿಸಿದ್ದೇನೆ. ಮರ ಮತ್ತು ವಿದ್ಯುತ್ ಕಂಬ ತೆರವಿಗೆ ಸಮಯ ಆಗುವುದು ಅನಿವಾರ್ಯ. ಇದೀಗ ಮಲ್ಪೆ ಕರಾವಳಿ ಜಂಕ್ಷನ್ ಕಾಮಗಾರಿ ವೇಗವಾಗಿ ನಡೆದಿದೆ ಎಂದು ಸಂಸದ ಪೂಜಾರಿ ತಿಳಿಸಿದ್ದಾರೆ.
ವಾಸ್ತವಿಕವಾಗಿ ಪರ್ಕಳದ ತಿರುವು ನೇರಗೊಳಿಸಿ ಕಾಮಗಾರಿ ನಡೆಯುತ್ತಿರುವಾಗ 11 ಭೂಮಾಲೀಕರು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯ ವರ್ಷದ ಬಳಿಕ ಮುಂದಿನ ತನಿಖೆಗೆ ದಿನಾಂಕ ನಿಗದಿ ಮಾಡಿದೆ. ಹೀಗಾಗಿ ಪರ್ಕಳದ ರಸ್ತೆಯ ತಿರುವಿನಲ್ಲಿ ಆಗುತ್ತಿರುವ ಅಪಘಾತಗಳ ಅಂಕಿ&ಸಂಖ್ಯೆಯನ್ನು ಎನ್ಎಚ್ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ, ಹೆದ್ದಾರಿ ಕಾಮಗಾರಿಯ ಅಗತ್ಯತೆ ವಿವರಿಸಲಾಗಿದೆ.11 ಮಂದಿಗೆ ಸರ್ಕಾರದ ವತಿಯಿಂದ ನ್ಯಾಯಾಲಯದಲ್ಲಿ 8 ಕೋಟಿ ರೂ. ಠೇವಣಿ ಇಟ್ಟು ಪುನಹ ಕಾಮಗಾರಿ ಮುಂದುವರಿಸಲಾಗಿತ್ತು. ಮತ್ತೆ ಆ 11 ಮಂದಿ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ವಕೀಲರ ಮೂಲಕ ಪ್ರಯತ್ನವನ್ನೂ ಮಾಡುತ್ತಿದ್ದೇನೆ ಎಂದು ಸಂಸದ ಪೂಜಾರಿ ತಿಳಿಸಿದ್ದಾರೆ.
ಸಂತೆಕಟ್ಟೆ ಕಲ್ಯಾಣಪುರದ ಅಂಡರಪಾಸ್ ಕಾಮಗಾರಿಗೂ ಸಹ ರಾಜಕೀಯ ಕಾರಣಗಳಿಗಾಗಿ ಟೀಕಿಸುತ್ತಿದ್ದಾರೆ. ಆದರೆ, ಕಾಮಗಾರಿ ಸ್ಥಳದಲ್ಲಿ ಬಂಡೆ ಅಡ್ಡ ಬಂದಿದ್ದರಿಂದ ಅದನ್ನು ಸ್ಫೋಟಿಸಿ ಒಡೆಯಲು ಮುಂದಾದಾಗ ನ್ಯಾಯಾಲಯದ ತಡೆಯಾಜ್ಞೆ ಬಂತು. ಹೀಗಾಗಿ ಸ್ಫೋಟಕದ ಬದಲು ಬಂಡೆಯನ್ನು ಕೊರೆದು ತೆಗೆಯಲು ಸಮಯವಾಯಿತು ಎಂಬ ಸಂಗತಿ ಅರ್ಥ ಮಾಡಿಕೊಳ್ಳಬೇಕು. ಸದ್ಯ ಅಲ್ಲಿಯೂ ಸಂಚಾರ ಸುಗಮವಾಗಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.
ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಕುರಿತಾಗಿ ಅನೇಕ ಪ್ರತಿಭಟನೆ, ಶವದ ಮೆರವಣಿಗೆ, ತಲೆಬೋಳಿಸುವಿಕೆ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯ ನಡುವೆಯೂ ಹತ್ತಾರು ಬಾರಿ ಸ್ಥಳದಲ್ಲೇ ನಿಂತು ಕಾಮಗಾರಿಗೆ ವೇಗ ಕೊಟ್ಟಿದ್ದೇನೆ. ಕಾಮಗಾರಿ ವಿಳಂಬಕ್ಕೆ ಕಾರಣರಾದ ಸಂಬಂಧಿತ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಿ ಗರ್ಡರ್ ಕಾಮಗಾರಿಗೆ ಗಡುವು ನಿಗದಿಸಿರುವುದು ಸರ್ಕಾರಿ ವ್ಯವಸ್ಥೆಯಲಿಯೇ ಅಪರೂಪ. ನನ್ನನ್ನು ಟೀಕಿಸುತ್ತಿರುವ ಉಡುಪಿಯ ಹಿರಿಯ ಮನೋವೈದ್ಯರ ಸಹಿತವಾಗಿ ಪ್ರತಿಭಟನಾಕಾರರು ಈ ಸಂಗತಿ ಗಮನಿಸಬೇಕು. ಇದೀಗ ಗರ್ಡರ್ ಜೋಡಣೆಯಾಗಿದ್ದು, ಕ್ರಿಬ್ಸ್ ತೆರವುಗೊಳಿಸಿ ಮೇಲ್ಸೇತುವೆ ಕಾಂಕ್ರೀಟಿಕರಣಕ್ಕೆ ಅಣಿಗೊಂಡಿದೆ. ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ಸಂಸದ ಪೂಜಾರಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶವದ ಮೆರವಣಿಗೆ ನಡೆಸಿ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆಗೆ ವಿರುದ್ಧವಾಗಿ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದರೂ ಸಹ ಅದನ್ನು ಮೌನವಾಗಿ ಸಹಿಸಿಕೊಂಡಿದ್ದೆ. ಪ್ರಜಾತಂತ್ರ ವ್ಯವಸ್ಥೆಯಡಿ ಮಾಡುವ ಎಲ್ಲ ಪ್ರತಿಭಟನೆಯನ್ನೂ ಗೌರವಿಸುತ್ತೇನೆ. ನನ್ನ ವಿರೋಧಿಸುತ್ತಿರುವವರು ಮೆಚ್ಚುವಂತೆ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಿವುದು ನನ್ನ ಗುರಿ. | ಕೋಟ ಶ್ರೀನಿವಾಸ ಪೂಜಾರಿ. ಸಂಸದ