

ಉಡುಪಿ: ವಿಜಯಪುರದಲ್ಲಿ ಸಾವಿರಾರು ಎಕ್ರೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಎಂಬೂದಾಗಿ ನಮೂದಾಗಿದ್ದು, ಸಚಿವ ಜಮೀರ್ ಅಹ್ಮದ್ ಎಲ್ಲವೂ ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ಕೊಡುತ್ತಿದ್ದಾರೆ. ರೈತರು ಒಂದು ತುಂಡ ಭೂಮಿ ಕಳೆದುಕೊಳ್ಳಬಾರದು. ತತ್ಕ್ಷಣವೇ ರೈತರಿಗೆ ಭೂಮಿ ಹಿಂದಿರುಗಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.
ಮಂಗಳವಾರ, ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾದ ಅವರು, ವಿಜಯಪುರ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. 11,500 ಎಕ್ರೆ ರೈತರ ಭೂಮಿ ವಕ್ಫ್ ಬೋರ್ಡ್ ಸ್ವಾಧಿನ ಪಡಿಸಿಕೊಂಡಿದೆ. 1988 ರಿಂದ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಇದೀಗ ಪಹಣಿ ವಕ್ಫ್ ಬೋರ್ಡ್ ಪಾಲಾಗಿದೆ. ಒಮ್ಮೆ ವಕ್ಫ್ ಬೋರ್ಡ್ ಇದು ನಮ್ಮ ಆಸ್ತಿ ಎಂದು ಗೊತ್ತುಪಡಿಸಿದರೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮೂಲಕ ಆ ಆಸ್ತಿಯನ್ನು ವಕ್ಫ್ ಬೋರ್ಡ್ಗೆ ನೀಡಬಹುದು. ಒಮ್ಮೆ ವಕ್ಫ್ ಬೋರ್ಡ್ಗೆ ಆಸ್ತಿ ನೀಡಿದ ಅನಂತರ ಅದನ್ನು ವಾಪಸ್ ನೀಡುವುದಿಲ್ಲ. ಒಂದು ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಇಂಥ ಕಾನೂನು ರೂಪಿಸಿದೆ. ಅನಿಯಂತ್ರಿತ ಕಾನೂನು ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ರೇಶನ್ ಕಾರ್ಡ್ ಪರಿಶೀಲನೆ ಕೈಬಿಡಿ
ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಬಿಪಿಎಲ್ ಕಾರ್ಡ್ ರದ್ದತಿಯಿಂದ ಕೇಂದ್ರ ಸರ್ಕಾರದ ಅಕ್ಕಿ, ಆಯುಷ್ಮಾನ್ ಯೋಜನೆಯ ಫಲ ಅನೇಕರಿಗೆ ಸಿಗುವುದಿಲ್ಲ. ಸರ್ಕಾರ ಈ ಯೋಚನೆ ಕೈಬಿಡದಿದ್ದರೆ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.
ಬಿ.ಕೆ. ಹರಿಪ್ರಸಾದ್ ಕ್ಷಮೆ ಯಾಚಿಸಲಿ
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಖಂಡನೀಯ. ಶ್ರೀಗಳ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದು, ಹಿಂದೂ ಸಮಾಜಕ್ಕೆ ನೋವು ತಂದಿದೆ. ತತ್ಕ್ಷಣವೇ ಬಿ.ಕೆ. ಹರಿಪ್ರಸಾದ್ ಕ್ಷಮೆ ಕೇಳಬೇಕು ಎಂದರು.