ಇತ್ತೀಚೆಗೆ ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದು ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೇ 4ರಂದು ಮಧ್ಯಾಹ್ನ ಭೇಟಿ ನೀಡಿದರು.
ಶಾಸಕ ರಾಜೇಶ ನಾಯ್ಕ ಅವರೊಂದಿಗೆ ತೆರಳಿದ್ದ ಸಂಸದ ಕೋಟ, ಸುಹಾಸ್ ಶೆಟ್ಟಿ ಅವರ ತಂದೆ-ತಾಯಿ ಮತ್ತು ಸಹೋದರರಿಗೆ ಸಾಂತ್ವನ ಹೇಳಿ, ಪ್ರಕರಣವನ್ನು ಎನ್ಐಎ ತನಿಖೆಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಅಳಲು ತೋಡಿಕೊಂಡ ತಾಯಿ
ಸುಹಾಸ್ ತಾಯಿ ಮಾತನಾಡಿ, ಸರ್ಕಾರವು ತನ್ನ ಮಗನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆತ ಸಾಯುವ 20 ದಿನಗಳ ಮೊದಲಿನಿಂದ ಪೊಲೀಸರು ಪದೇಪದೆ ಪರಿಶೀಲಿಸಿ, ಆತನ ಕಾರು ತಪಾಸಣೆ ಮಾಡಿ ಆತ ನಿಶಸ್ತ್ರನಾಗಿರುವಂತೆ ಮಾಡಿದ್ದರು. ಪ್ರಯಾಣದ ಸಂದರ್ಭದಲ್ಲಿ ಯಾವುದೇ ಶಸ್ತ್ರಾಸ್ತ್ರ ಇಟ್ಟುಕೊಳ್ಳದ ಹಾಗೆ ಮಾಡಿ ಸರ್ಕಾರವೇ ನನ್ನ ಮಗನನ್ನು ಕೊಲ್ಲಲು ಪರೋಕ್ಷವಾಗಿ ಸಹಕರಿಸಿದೆ ಎಂದು ದೂರಿದರು.
ಮನೆಗೆ ಬಾರದ ಸಚಿವರು
ಪೊಲೀಸರು ಮಗನನ್ನು ಠಾಣೆಗೆ ಕರೆಸಿ ಯಾವುದೇ ಕಾರಣಕ್ಕಾದರೂ ಶಸ್ತ್ರಾಸ್ತ್ರ ಇಟ್ಟುಕೊಂಡರೆ ಜೈಲಿಗೆ ಅಟ್ಟುತ್ತೇವೆ ಎಂದು ಪೊಲೀಸರ ಮೂಲಕ ಸರ್ಕಾರಕ ಬೆದರಿಸಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಹಂತಕರಿಗೆ ಸುಲಭವಾಯಿತು. ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಸಹ ನಮ್ಮ ಮನೆಗೆ ಬಂದಿಲ್ಲ. ಮಗನನ್ನು ಕಳೆದುಕೊಂಡು ನೊಂದಿರುವ ನಮಗೆ ಸಾಂತ್ವನ ಹೇಳುವಷ್ಟೂ ಅವರಿಗೆ ಸಮಯ ಇಲ್ಲದಾಗಿದೆ. ಮುಸ್ಲಿಮರೊಂದಿಗೆ ಸಭೆ ನಡೆಸಲು, ಅವರು ಹೇಳಿದಂತೆ ಕುಣಿಯಲು ಸರ್ಕಾರಕ್ಕೆ ಸಮಯವಿದೆ ಎಂದು ಸುಹಾಸ್ ತಂದೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ದೇವದಾಸ ಶೆಟ್ಟಿ, ಸುಹಾಸ್ ಕುಟುಂಬದವರು ಇದ್ದರು.