ಎಸ್ಸಿ, ಎಸ್ಟಿ ಸಮುದಾಯದ ವಿರೋಧಿ ರಾಜ್ಯಸರ್ಕಾರ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪ

MP Kota Srinivas Poojary press conference Mandya
Published on

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆಂದು ಮೀಸಲಿಟ್ಟ ಅನುದಾನವನ್ನು ಗ್ಯಾರೆಂಟಿ ಯೋಜನೆ ಸೇರಿದಂತೆ ಇತರೆ ಕಾರ್ಯಕ್ರಮಕ್ಕೆ ರಾಜ್ಯಸರ್ಕಾರ ಬಳಸುವ ಮೂಲಕ ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

2023ರಲ್ಲಿ ಎಸ್ಸಿ, ಎಸ್ಟಿಗೆ ಮೀಸಲಿರಿಸಿದ 11,144 ಕೋಟಿ ರೂ, 2024ರಲ್ಲಿ 14,282 ಸಾವಿರ ಕೋಟಿ ರೂ ಹಣವನ್ನು ಗ್ಯಾರೆಂಟಿಗೆ ಬಳಸಲಾಗಿದೆ. ಈಗ 2025ರಲ್ಲಿ ಮಂಡನೆ ಮಾಡುವ ಬಜೆಟ್‌ನಲ್ಲಿ 14,488 ಸಾವಿರ ಕೋಟಿ ರೂ ತೆಗೆದಿಡಲು ಯೋಜನೆ ರೂಪಿಸುತ್ತಿದೆ. 2023ರಿಂದ 25ರವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರಿಸಿದ 39,914 ಸಾವಿರ ಕೋಟಿ ರೂಗಳನ್ನು ಬಳಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಗ್ಯಾರೆಂಟಿಗೆ ಎಸ್ಸಿಪಿ ಹಾಗೂ ಟಿಎಸ್ಪಿ ಹಣವನ್ನು ಬಳಸಿಕೊಂಡು ಪರಿಶಿಷ್ಟರ ಹಣವನ್ನು ಅದೇ ಸಮುದಾಯಕ್ಕೆ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ಯಾರೆಂಟಿ ಯೋಜನೆಯು ಎಲ್ಲ ವರ್ಗದವರಿಗೂ ದೊರೆಯುತ್ತಿದೆ. ಹೀಗಿರುವಾಗ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಹಾಗೂ ಸಾಮಾನ್ಯ ವರ್ಗದ ಹಣವನ್ನು ಏಕೆ ಗ್ಯಾರೆಂಟಿಗೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಸಾಲದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಇರುವಂತಹ ವಿವಿಧ ನಿಗಮಗಳಿಗೂ ಮೀಸಲಿರಿಸಲಾದ 332 ಸಾವಿರ ಕೋಟಿ ರೂಗಳಲ್ಲಿ ಕನಿಷ್ಟ ಪ್ರಮಾಣದ ಮೊತ್ತವನ್ನು ಮಾತ್ರ ಬಳಸಿ, ಬೃಹತ್ ಮೊತ್ತವನ್ನು ಗ್ಯಾರೆಂಟಿಗೆ ವಿನಿಯೋಗಿಸಲಾಗಿದೆ ಎಂದರು.

ಮೀಸಲಿರಿಸಿದ ಅನುದಾನ ಅನ್ಯ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದರಿಂದ ಸಮುದಾಯದ ಅಭಿವೃದ್ಧಿ ಕುಂಠಿತವಾಗಲಿದೆ. ಈ ಹಣವನ್ನು ಹಿಂದಿರುಗಿಸಿ, ಮುಂದಿನ ಬಜೆಟ್‌ನಲ್ಲಿಯೂ ಎಸ್ಸಿ ಮತ್ತು ಎಸ್ಟಿ ಸಮುದಾಯದ ಹಣವನ್ನು ಗ್ಯಾರೆಂಟಿಗೆ ಬಳಸದೇ ಸಮುದಾಯಕ್ಕೆ ಸದ್ವಿನಿಯೋಗವಾಗುವಂತೆ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುತ್ತಿದೆ. ಮಾ.7ರಂದು ಮಂಡನೆ ಮಾಡಲಾಗುತ್ತದೆ ಎನ್ನಲಾಗುವ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗೃಹಲಕ್ಷ್ಮೀ ಯೋಜನೆಗೆ 7,344 ಸಾವಿರ ಕೋಟಿ ರೂ, ಗೃಹಜ್ಯೋತಿಗೆ 3,467 ಸಾವಿರ ಕೋಟಿ ರೂ, ಶಕ್ತಿಯೋಜನೆಗೆ 1,209 ಸಾವಿರ ಕೋಟಿ ರೂ, ಅನ್ನಭಾಗ್ಯಕ್ಕೆ 2,125 ಸಾವಿರ ಕೋಟಿ ರೂ, ಯುವನಿಧಿಗೆ 342 ಸಾವಿರ ಕೋಟಿ ಸೇರಿದಂತೆ 14,488 ಸಾವಿರ ಕೋಟಿ ರೂ ವಿನಿಯೋಗ ಮಾಡಲು ಸಿದ್ದತೆ ಮಾಡಲಾಗುತ್ತಿದೆಂಬ ಮಾಹಿತಿ ದೊರೆತಿದೆ ಎಂದು ವಿವರಿಸಿದರು.

ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಮಾಜಿ ಶಾಸಕ ಬಾಲರಾಜು, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ಇಂದ್ರೇಶ್, ಸಚ್ಚಿದಾನಂದ, ಅಶೋಕ್ ಜಯರಾಂ, ಅರುಣ್‌ಕುಮಾರ್, ಎಸ್.ಪಿ.ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net