

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಅಳವಡಿಸಲು ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳ ಆಯ್ಕೆಗೆ ಶಿಫಾರಸು ಮಾಡಲಾಗಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ವಿಚಾರವಾಗಿ ಮೇ 16ರಂದು ಬೆಳಗ್ಗೆ ಕರೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ,
ಕಾಪುವಿನ ಮಜೂರು, ಉಡುಪಿಯ ಉಪ್ಪೂರು ಗ್ರಾಪಂಗಳನ್ನು ಸೂರ್ಯ ಘರ್ ಯೋಜನೆಯಡಿ ಮಾದರಿ ಸೋಲಾರ್ ಗ್ರಾಪಂಗಳಾಗಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಯೋಜನೆಯಡಿ ಮನೆಮನೆಗೂ ಸ್ವಯಂ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ನಿಟ್ಟಿನಲ್ಲಿ 300 ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು 2.20 ಲಕ್ಷ ರೂ. ಸಾಲ ಸೌಲಭ್ಯ ನೀಡಲಿದೆ. ಸೋಲಾರ್ ಅಳವಡಿಸಿಕೊಳ್ಳುವ ಕುಟುಂಬಗಳಿಗೆ 78 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತೀಕ ಬಾಯಲ್, ಉಡುಪಿ ಜಿಲ್ಲಾ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ ಉಪಾಧ್ಯಾಯ ಇತರರಿದ್ದರು.
ಪ್ರಥಮ ಹಂತದಲ್ಲಿ ಆಯ್ಕೆಯಾದ ಐದು ಗ್ರಾಪಂಗಳಲ್ಲಿನ ಯಶಸ್ಸನ್ನು ಪರಿಶೀಲಿಸಿ ಸೂರ್ಯ ಘರ್ ಯೋಜನೆಯನ್ನು ಪ್ರತಿ ಗ್ರಾಪಂ ಮತ್ತು ನಗರಾಡಳಿತ ಸಂಸ್ಥೆಗಳ ಎಲ್ಲ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಶ್ರಮ-ಕ್ರಮ ವಹಿಸಲಾಗುವುದು. ಆಯ್ಕೆಯಾದ ಗ್ರಾಪಂಗಳಿಗೆ ವಿಶೇಷ ಅನುದಾನ ನೀಡಲೂ ಸಹ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ