ಅಕ್ಟೋಬರ್​ 2ರ ವರೆಗೆ ಜಿಲ್ಲೆಯಲ್ಲಿ ಸ್ವಚ್ಛೋತ್ಸವ

Abhiyaana
Published on

ಉಡುಪಿ ಸಂಸದ ಕೋಟ ಪೂಜಾರಿ ಮಾಹಿತಿ

ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಹಾತ್ಮ ಗಾಂಧೀಜಿ ಅವರ ಜಯಂತಿ ನಿಮಿತ್ತ ಪ್ರತಿವರ್ಷ ಅ.2ರಂದು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅದರ ಪೂರ್ವಭಾವಿಯಾಗಿ ಹಲವು ಜಾಗೃತಿ ಕಾರ್ಯಕ್ರಮ ಹಾಗೂ ಸಾಮೂಹಿಕ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಸೆ.17ರಿಂದ ಅ.2ರ ವರೆಗೆ ಸ್ವಚ್ಛೋತ್ಸವ ಎಂಬ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2025ರ ಅಭಿಯಾನ ನಡೆಯಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್​ 17ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಸ್ವಚ್ಛತಾ ಹೀ ಸೇವಾ ಪಾಕ್ಷಿಕಕ್ಕೆ ಚಾಲನೆ ನೀಡಿ ಮಾತನಾಡಿದರು.

ನೈರ್ಮಲ್ಯ ಕುರಿತು ಅರಿವು

ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯದಿಂದ ಈ ಅಭಿಯಾನ ಆಚರಿಸಲಾಗುತ್ತಿದೆ. 2017ರಲ್ಲಿ ಆರಂಭವಾದ ಅಭಿಯಾನವು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಹಾಗೂ ಸಹಭಾಗಿತ್ವಕ್ಕಾಗಿ ಉಡುಪಿ ಜಿಲ್ಲಾದ್ಯಂತ ಗ್ರಾಪಂ ಹಾಗೂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಬೀಚ್​, ಜಲಮೂಲಗಳ ಸ್ಥಳ, ವಿವಿಧೆಡೆ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಸ್ವಚ್ಛತಾ ಸಿಬ್ಬಂದಿಗೆ ಸಫಾಯಿ ಮಿತ್ರ ಸುರಕ್ಷಾ ಶಿಬಿರ ಸೇರಿದಂತೆ ಅನೇಕ ಚಟುವಟಿಕೆ ಆಯೋಜಿಸಲಾಗಿದೆ ಎಂದರು.

ಶಾಸಕ ಯಶ್​ಪಾಲ್​ ಸುವರ್ಣ, ಸ್ವಚ್ಛ ಭಾರತ್​ ಮಿಷನ್​ನ ಜಿಲ್ಲಾ ನೋಡಲ್​ ಅಧಿಕಾರಿ ಡಾ.ಉದಯ ಶೆಟ್ಟಿ, ಜಿಪಂ ಉಪಕಾರ್ಯದರ್ಶಿ ಎಸ್​.ಎಸ್​. ಕಾದ್ರೋಳಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net