

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ 169-ಎ ಅಗಲೀಕರಣ ಕಾಮಗಾರಿಗಾಗಿ ಭೂಮಿ ನೀಡಿದ ಮಾಲೀಕರಿಗೆ ಅನ್ಯಥಾ ವಿಳಂಬ ಮಾಡದೆ ಹಣ ಪಾವತಿಸಿ ಎಂದು ಭೂಸ್ವಾಧೀನಾಧಿಕಾರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜೂನ್ 23ರಂದು ಸಂಜೆ ಆಯೋಜಿಸಿದ್ದ ಉಡುಪಿಯ ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಡಿಡಿಎಲ್ಆರ್ ರವೀಂದ್ರ, ಎಡಿಎಲ್ಆರ್ ತಿಪ್ಪರಾಯ ಕೆ. ತೊರವಿ, ಉಡುಪಿ ತಹಸೀಲ್ದಾರ್ ಗುರುಪ್ರಸಾದ, ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ ನಾಯಕ, ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಜೆ. ಕಲ್ಮಾಡಿ, ಮಂಜು ಕೊಳ ಉಪಸ್ಥಿತರಿದ್ದರು.
ಒಂಬತ್ತು ಪ್ರಕರಣಗಳಲ್ಲಿ ಕೌಟುಂಬಿಕ ತಕರಾರು ಇರುವುದರಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಹಣವನ್ನು ಕೋರ್ಟ್ನಲ್ಲಿ ಡೆಪಾಸಿಟ್ ಇಡಬೇಕು. ಮೂಡನಿಡಂಬೂರು ಗ್ರಾಮದಲ್ಲಿ 40 ಪ್ರಕರಣ, ಕೊಡವೂರಿನ 50 ಸಣ್ಣ&ಪುಟ್ಟ ಭೂಸ್ವಾಧೀನಕ್ಕಾಗಿ ಕೂಡಲೇ ಸರ್ವೆ ನಡೆಸಿ, ಜು.5ರ ಒಳಗೆ 3ಡಿ ಪ್ರಸ್ತಾವನೆ ಸಲ್ಲಿಸಲು ಉಡುಪಿ ತಾಲೂಕಿನ ಎಡಿಎಲ್ಆರ್ಗೆ ಸಂಸದ ಕೋಟ ಸಲಹೆ ನೀಡಿದರು.
ಪರ್ಕಳದ ಸಮೀಪ ಕೆಳ ಪರ್ಕಳದಲ್ಲಿ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹೊಂಡಗಳಿಂದಾಗಿ ದಿನವೂ ಸಣ್ಣ-ಪುಟ್ಟ ಅಪಘಾತವಾಗುತ್ತಿದೆ. ಹೆದ್ದಾರಿ ಅಧಿಕಾರಿಗಳು ತುರ್ತಾಗಿ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ