

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ಬ್ರಹ್ಮಾವರವೂ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಸಮಸ್ಯೆ ನೀಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ
(ಆರ್ಒ) ವಿ.ಪಿ. ಬ್ರಾಹ್ಮಣಕರ್ ಅವರಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಏ.22ರಂದು ಅಧಿಕಾರಿಯನ್ನು ಭೇಟಿಯಾಗಿ ಜಿಲ್ಲೆಯ ಹೆದ್ದಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹೆಜಮಾಡಿಯಿಂದ ಪ್ರಾರಂಭವಾಗಿ ಕುಂದಾಪುರದವರೆಗೆ ಈಗಾಗಲೇ 15 ಕಿ.ಮೀ. ಸರ್ವಿಸ್ ರಸ್ತೆ ಆಗಿದೆ. ಉಳಿದ 42 ಕಿ.ಮೀ. ಹೊಸ ಸರ್ವಿಸ್ ರಸ್ತೆಗಳ ನಿಮಾರ್ಣ ಅಗತ್ಯವಾಗಿ ಆಗಬೇಕಿದೆ ಎಂದರು.
ಬ್ರಹ್ಮಾವರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾನೆ. ಭದ್ರಗಿರಿ ಜಂಕ್ಷನ್ನಿಂದ ಉಪ್ಪಿನಕೋಟೆಯವರೆಗೆ ಸರ್ವಿಸ್ ರೋಡ್ ಮಾಡುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಆದರೆ, ಕಾಮಗಾರಿಯನ್ನೇ ಪ್ರಾರಂಭ ಮಾಡಿಲ್ಲ. ತ್ವರಿತವಾಗಿ ತಾವು ಬ್ರಹ್ಮಾವರದಲ್ಲಿ ಮೇಲ್ಸೇತುವೆಗಾಗಿ ಹಾಗೂ ಬಾಕಿ ಸರ್ವಿಸ್ ರಸ್ತೆಗಾಗಿ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಬೇಕು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರದ ಮೂಲಕ ಮಾಹಿತಿ ನೀಡಿದ್ದಾಗಿ ತಿಳಿಸಿದರು.
ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅಧಿಕಾರಿ ಬ್ರಾಹ್ಮಣಕರ್, ಯೋಜನಾ ವರದಿ ತಯಾರಿಸಿ ವಾರದ ಒಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.