ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಶಾಪ ವೈಫಲ್ಯಗಳ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪ

mng-21 may Kota poojari
Published on

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷ, ಅಸೂಯೆ, ಅಪಪ್ರಚಾರದ ಮೂಲಕ ಜನರ ಬದುಕಿಗೆ ಶಾಪವಾಗಿದೆ. ಇಂತಹ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿಜೆಪಿ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಡಾ ಹಗರಣ, ವಾಲ್ಮೀಕಿ ಹಗರಣ, ರೈತರಿಗೆ ಮೋಸ, ಬಾಣಂತಿಯರ ಸಾವು, ವಕ್ಫ್ ಭೂಗಳ್ಳತನ, ಹಾಲಿನ ದರ ಏರಿಕೆ, ಶೇ.60 ಕಮಿಷನ್, ದಲಿತರ ಹಣ ಲೂಟಿ, ಹನಿ ಟ್ರ್ಯಾಪ್ ಪ್ರಕರಣಗಳು ನಡೆದಿವೆ. ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಇಷ್ಟೆಲ್ಲ ವೈಫಲ್ಯಗಳಿದ್ದರೂ ಸರ್ಕಾರ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಮಾಡಿ ಜನರನ್ನು ಮೋಸ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್ ನಿಜವಾದ ಸಾಧನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಪ್ರಧಾನಿ ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರದಿಂದ ವಾರ್ಷಿಕ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ರೂ. ಕೃಷಿಕರ ಖಾತೆಗೆ ಜಮೆ ಆಗುತ್ತಿತ್ತು. ಬಿಎಸ್‌ವೈ ಸರ್ಕಾರ ಜಾರಿಗೆ ತಂದ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಎಸ್‌ಸಿ ಎಸ್‌ಟಿಗೆ ಮೀಸಲಿರಿಸಲಾದ 34,500 ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ. ಇದು ಸರ್ಕಾರ ರೈತರು ಮತ್ತು ಎಸ್‌ಸಿ ಎಸ್‌ಟಿ ಸಮುದಾಯದ ಬಗೆಗಿನ ನಿಲುವನ್ನು ತೋರಿಸುತ್ತದೆ ಎಂದರು.

ರಾಜ್ಯ ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ವಿನಾ ಕಾರಣ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅಪರೇಷನ್ ಸಿಂಧೂರ ಭದ್ರತಾ ವೈಫಲ್ಯ ಎನ್ನುವ ಕಾಂಗ್ರೆಸಿಗರು, ಅವರದೇ ಪ್ರಧಾನಿಗಳಾಗಿದ್ದ ಸಂದರ್ಭ ಭದ್ರತೆ ಹೊರತೂ ನಡೆದ ಉಗ್ರ ದಾಳಿ, ಇಂದಿರಾ, ರಾಜೀವ್‌ಗಾಂಧಿ ಹತ್ಯೆ ಬಗ್ಗೆ ಏನೆನ್ನಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಶಾಸಕರಾದ ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net