

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಸುರಂಗಮಾರ್ಗ ಕಾಮಗಾರಿ ನಾನು ಸಂಸದನಾದ ನಂತರ ಪೂರ್ಣ ವೇಗ ಪಡೆದಿದೆ. ನಾನು ಕ್ಷೇತ್ರದಲ್ಲಿಯೇ ಇರುವ ಪ್ರತಿದಿನಗಳಲ್ಲೂ ಸಹ ಸ್ಥಳಕ್ಕೆ ಆಗಮಿಸಿ ಕಾಮಗಾರಿ ವೀಕ್ಷಿಸುತ್ತಿದ್ದೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಂತೆಕಟ್ಟೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಬೈಪಾಸ್ ರಸ್ತೆ ಕಾಮಗಾರಿ ವಿಚಾರವಾಗಿ ಕಳೆದ 4 ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಹಾಗೂ ಎಸ್ಪಿ ಸಮಕ್ಷಮ 8ಕ್ಕೂ ಹೆಚ್ಚು ಸಭೆ ಮಾಡಿದ್ದೇನೆ. ಹೆದ್ದಾರಿ ಅಧಿಕಾರಿಗಳೊಡನೆ ನಾಲ್ಕಾರು ಬಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದೇನೆ ಎಂದರು.
ಇದೇ ವಿಚಾರವಾಗಿ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರನ್ನು ಕಳೆದ ತಿಂಗಳು ಭೇಟಿಯಾಗಿ, ಕಾಮಗಾರಿ ಬೇಗ ಮುಗಿಸಲು ವಿನಂತಿಸಿದ್ದೇನೆ. ಅವರು ಜನವರಿ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ಹಾಗೂ ತಾನೇ ಉದ್ಘಾಟನೆಗೆ ಬರುವುದಾಗಿಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಬೆಂಗಳೂರು ಮತ್ತು ದೆಹಲಿಯ ಹಿರಿಯ ಅಧಿಕಾರಿಗಳ ಜತೆ ವಿಸಿ ಮಾಡಿಸಿದ್ದೇನೆ. ಕುಂದಾಪುರದಿಂದ ಉಡುಪಿಗೆ ಹೋಗುವ ಭಾಗದಲ್ಲಿ ಲಘು ವಾಹನ ಸಂಚಾರಕ್ಕಾಗಿ ಮೇಲ್ಸೆತುವೆ ತೆರವು ಮಾಡಿಸಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ತೇವಾಂಶ ಅಧಿಕ ಇರುವುದರಿಂದ ವೆಟ್ ಮಿಕ್ಸ್ ಹಾಕಿ ಹೊಂಡ ಮುಚ್ಚಿಸಬೇಕಿದೆ. ಆದರೆ, ಈ ಕ್ರಮದಿಂದ ಬಿಸಿಲು ಬಂದಾಗ ಧೂಳಿನ ಸಮಸ್ಯೆಯಾಗುತ್ತದೆ. ಸರಿಯಾಗಿ ಬಿಸಿಲು ಬಿದ್ದ ಬಳಿಕ ರಸ್ತೆಗೆ ಡಾಂಬರ್ ಹಾಕಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಂತೆಕಟ್ಟೆಯಲ್ಲಿ ಸದ್ಯ ಬಂಡೆ ಒಡೆಯುವ ಕಾಮಗಾರಿಗೆ ನಡೆಯುತ್ತಿದೆ. ಆದರೆ, ಅಕ್ಕಪಕ್ಕದ ಬೃಹತ್ ಕಟ್ಟಡದವರು ಭಾರಿ ಸ್ಫೋಟಕ ಬಳಸದಂತೆ ಆದೇಶ ತಂದಿರುವುದರಿಂದ ಡ್ರಿಲ್ಲಿಂಗ್ ಮೂಲಕ ಬಂಡೆ ತೆರವು ಮಾಡಲಾಗುತ್ತಿದೆ. ಈ ಮಧ್ಯೆ, ಅಗತ್ಯ ಬಿದ್ದರೆ ಹೆದ್ದಾರಿ ಅಧಿಕಾರಿಗಳನ್ನು ಬದಲಿಸುವ ಕುರಿತೂ ಸಹ ಚರ್ಚೆ ಮಾಡುತ್ತಿದ್ದೇವೆ. ಸಂತೆಕಟ್ಟೆಯ ಅವ್ಯವಸ್ಥೆ ಕುರಿತು ಸಹಜವಾದ ಟೀಕೆ ಮತ್ತು ಟ್ರೋಲ್ ಗಮನಿಸುತ್ತಿದ್ದೇನೆ. ಆದರೆ, ಅವರೆಲ್ಲ ನನ್ನ ಮತದಾರರೇ ಆಗಿದ್ದು ಅವರ ಹೇಳಿಕೆಗಳನ್ನೆಲ್ಲ ಗೌರವಿಸುತ್ತ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಊರಲ್ಲಿರುವ ದಿನಗಳಲ್ಲಿ ಪ್ರತಿದಿನ ಭೇಟಿ ಕೊಡುತ್ತಿದ್ದೇನೆ ಎಂದು ಸಂಸದ ಕೋಟ ತಿಳಿಸಿದರು.