

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ 100 ಕಿ.ಮೀ.ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ, ರಸ್ತೆ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಏ.8ರಂದು ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಜಂಕ್ಷನ್ನಿಂದ ಬ್ರಹ್ಮಾವರ ಮಹೇಶ ಆಸ್ಪತ್ರೆ ಜಂಕ್ಷನ್ವರೆಗೆ ಮೇಲ್ಸೇತುವೆ ಅಥವಾ ಅಂಡರ್ಪಾಸ್ ನಿರ್ಮಿಸುವ ಕುರಿತು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿತ ಕುಂದು-ಕೊರತೆಗಳ ರ್ಚಚಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ಹೆದ್ದಾರಿಯಲ್ಲಿ ಜನರ ಅಜಾಗರೂಕತೆ ಅಥವಾ ವಾಹನ ಚಾಲಕರ ಅತಿ ವೇಗದ ಚಾಲನೆಯಿಂದ ಅಪಘಾತ ಉಂಟಾಗುತ್ತಿವೆ. ಹೀಗಾಗಿ ಹೆಚ್ಚು ಜನನಿಬಿಡ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಅಥವಾ ಅಂಡರ್ಪಾಸ್ ನಿಮಾರ್ಣದ ಅವಶ್ಯಕತೆ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗಳು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಬ್ರಹ್ಮಾವರ ಹಾಗೂ ತೆಕ್ಕಟ್ಟೆಯಲ್ಲಿ ಮೇಲ್ಸೇತುವೆ ನಿಮಾರ್ಣ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಯೋಜನೆ ರೂಪಿಸಿ ಎಂದರು.
ಗ್ರಾಪಂನ ಪಿಡಿಒಗಳು ಹಾಗೂ ಅಧ್ಯಕ್ಷರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಮಳೆಯ ನೀರು ಸರಾಗವಾಗಿ ಹೆದ್ದಾರಿ ರಸ್ತೆ ಬದಿಯ ಚರಂಡಿಗಳ ಮೂಲಕ ಹರಿದು ತೋಡು ಸೇರುವಂತೆ ಸಂಪರ್ಕ ಕಲ್ಪಿಸಬೇಕು. ದಾರಿದೀಪ ಅಳವಡಿಕೆ, ಲಿಂಕ್ ರಸ್ತೆಗಳಿಗೆ ಡಾಂಬರೀಕರಣ, ಹೆದ್ದಾರಿ ನಿರ್ವಹಣೆಯ ಆಂಬುಲೆನ್ಸ್ಗಳು ಸಕಾಲದಲ್ಲಿ ಲಭ್ಯವಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ ಕೆ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ತಾಲೂಕುಗಳ ತಹಸೀಲ್ದಾರರು, ಇಒಗಳು ಉಪಸ್ಥಿತರಿದ್ದರು.