

ಕಾರವಾರ: ಬೆಂಗಳೂರ-ಮುರ್ಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಿಸಬೇಕು ಎಂಬುದು ಸೇರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಮನವಿಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮಾಡಿದ್ದಾರೆ.
ದೆಹಲಿಯ ಕಚೇರಿಯಲ್ಲಿ ಸೋಮಣ್ಣ ಅವರನ್ನು ಭೇಟಿ ಮಾಡಿ ಜಿಲ್ಲೆಯ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ತಾಳಗುಪ್ಪ ಬೆಂಗಳೂರು-ಮೈಸೂರು ರೈಲನ್ನು ಮಲ್ಲೇಶ್ವರಂನಲ್ಲಿ ನಿಲುಗಡೆ ಮಾಡಬೇಕು. ಖಾನಾಪುರದಲ್ಲಿ ಗೋವಾ ಎಕ್ಸ್ಪ್ರೆಸ್, ಬೆಳಗಾವಿ ಎಕ್ಸ್ಪ್ರೆಸ್, ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್, ದಾದರ್ ಸೆಂಟ್ರಲ್ ಎಕ್ಸ್ಪ್ರೆಸ್, ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲುಗಳನ್ನು ನಿಲ್ಲಿಸಬೇಕು. ಹುಬ್ಬಳ್ಳಿ ಅಂಕೋಲಾ ಬ್ರಾಡ್‌ಗೇಜ್ ಡಬ್ಬಲ್ ಲೈನ್ ವಿದ್ಯುದೀಕರಣ ಕಾಮಗಾರಿಗೆ ಅನುಮೋದನೆ ನೀಡಬೇಕು.
ಧಾರವಾಡ ದಾಂಡೇಲಿವರೆಗೆ ರೈಲು ಸೇವೆಯನ್ನು ಪುನರ್‌ಸ್ಥಾಪಿಸಬೇಕು. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಲೈನ್ ಎಫ್‌ಎಲ್‌ಎಸ್ ಕಾಮಗಾರಿ ತ್ವರಿತಗೊಳಿಸಬೇಕೆಂದು ಮನವಿ ಮಾಡಿದರು. ಸೋಮಣ್ಣ ಅವರು ರೈಲ್ವೆ ಅಧಿಕಾರಿಗಳನ್ನು ಕರೆಸಿ, ಸಭೆ ನಡೆಸಿದ್ದು, ಸಂಸದರು ನೀಡಿದ ಮನವಿಗಳನ್ನು ಜಾರಿ ಮಾಡುವಂತೆ ಆದೇಶಿಸಿದ್ದಾರೆ ಎಂದು ಕಾಗೇರಿ ಕಚೇರಿ ಪ್ರಕಟಣೆ ತಿಳಿಸಿದೆ.