

ಬೆಳಗಾವಿ:ಚಂದಿಗಡ ನಗರದಲ್ಲಿ ಜರುಗಿದ 190ನೇ ಇಎಸ್‌ಆಯ್ ಕಾರ್ಪೋರೇಶನ ಸಭೆಯಲ್ಲಿ ಬೆಳಗಾವಿಯಲ್ಲಿ 100 ಹಾಸಿಗೆಗಳ ಇ.ಎಸ್.ಆಯ್.ಸಿ ಆಸ್ಪತ್ರೆ ಸ್ಥಾಪಿಸಲು ಅನುಮೋದನೆ ನೀಡಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 2 ವರ್ಷಗಳ ಸತತ ಪ್ರಯತ್ನದಿಂದ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿತ್ತು. ರಾಜ್ಯಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಜಿಲ್ಲೆಯಲ್ಲಿ ಸುಮಾರು 1.25 ಸಾವಿರಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕ ವರ್ಗವಿದ್ದು ಈ ಎಲ್ಲಾ ಕುಟುಂಬದ ಸದಸ್ಯರುಗಳಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಲಿರುವ ಮುಂಚೆಯೇ ಕೇಂದ್ರ ಸರ್ಕಾರ ಬೆಳಗಾವಿ ಜನೆತೆಗೆ ಒಂದು ಸಂತಸ ಸಂದೇಶವನ್ನು ನೀಡಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಮತ್ತು ರಾಜ್ಯದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಕಿತ್ತೂರು ಕರ್ನಾಟಕ ಜನತೆಯ ಪರವಾಗಿ ಸಂಸದರು ಅಭಿನಂದಿಸಿದ್ದಾರೆ