

ವಿಜಯಪುರ: ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ದುರಾಡಳಿಕತಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆಂದು ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.
ದೇಹಲಿ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ಬಿಜೆಪಿ ಬಹುಮುತ ಸಾಬೀತು ಪಡಿಸುವ ನಿಟ್ಟಿನಲ್ಲಿ ದಾಫುಗಾಲಿಟ್ಟಿದೆ. ಆಮ್ ಆದ್ಮಿಗೆ ತೀವ್ರ ಹಿನ್ನಡೆಯಾಗಿದೆ. ಇದು ಆಮ್ ಆದ್ಮಿಯ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಜನ ಕಲಿಸಿದ ತಕ್ಕ ಪಾಠ ವೆಂದು ಶನಿವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಕಾರಣವಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಸುಮಾರು 11 ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಅತ್ಯುತ್ತಮ ಆಡಳಿತ ಮಾಡಿದ ಪರಿಣಾಮ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷಗಳ ಇತಿಹಾಸದಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟು ಹಾಕಿ ದೇಶದ ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವಂಥ ಕೇಜ್ರಿವಾಲ್ ಎಂಬ ವ್ಯಕ್ತಿಯಷ್ಟು ದುರಾಡಳಿತ ಬೇರೆ ಯಾರೂ ನೀಡಿಲ್ಲ. ಪುಕ್ಸಟ್ಟೆ ಯೋಜನೆಗಳ ಆಮಿಷ ತೋರಿಸಿ ಜನರ ಮನಸ್ಸು ಕದ್ದ ಮಹಾ ದ್ರೋಹಿ ಕೇಜ್ರಿವಾಲ್ ಎಂದರು.
ದೇಶದ ಚುನಾವಣೆ ಬಹಳ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆದು ಬರುತ್ತಿರುವ ಸಮಯದಲ್ಲಿ ಪುಕ್ಸಟ್ಟೆಯಾಗಿ ನೀರು, ಬಸ್, ಅಕ್ಕಿ ಮತ್ತಿತರ ಸೌಲಭ್ಯ ಕೊಡುವ ಆಸೆ ತೋರಿಸಿ, ಜನರ ಮತ ಪಡೆದು ದುರಾಡಳಿತ ನಡೆಸಿದ ಕೇಜ್ರಿವಾಲ್ ಕೊನೆಗೆ ಜೈಲಿಗೆ ಹೋದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಸಂವಿಧಾನಕ್ಕೆ ದ್ರೋಹ ಬಗೆದರು. ಜೈಲಿನಲ್ಲಿಯೇ ಕುಳಿತು ಆಡಳಿತ ನಡೆಸುವುದಾಗಿ ಹೇಳಿದರು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ಲಜ್ಜೆಗೆಟ್ಟು ಜೈಲಿನಲ್ಲಿಯೇ ಕುಳಿತು ಆಡಳಿತ ಮಾಡಿದ ಸಂವಿಧಾನ ದ್ರೋಹಿ ಈ ಕೇಜ್ರಿವಾಲ್. ಹೀಗಾಗಿ ಜನ ಪಾಠ ಕಲಿಸಿದ್ದಾರೆ ಎಂದರು.
ದೆಹಲಿ ಕೇಂದ್ರಾಡಳಿತ ಪ್ರದೇಶ. ಅಲ್ಲಿ ಮಹಾನಗರ ಪಾಲಿಕೆಯಿದೆ. ನೀರಾವರಿ, ವಿದ್ಯುತ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವ್ಯವಸ್ಥೆ ಇರಲ್ಲ. ಅತ್ಯಂತ ಮಧ್ಯಮ ವರ್ಗದ ಜನ ಇರುವ ಪ್ರದೇಶ. ಸರ್ಕಾರಕ್ಕೆ ಹೆಚ್ಚು ತೆರಿಗೆ ಆದಾಯ ಬರುವ ಪ್ರದೇಶ. ಹೀಗಾಗಿ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಆದರೆ ಅಲ್ಲಿ ಬಡಬಗ್ಗರು ರಸ್ತೆಯ ಮೇಲೆಯೇ ಇದ್ದಾರೆ. ಅವರಿಗೆ ಮನೆ-ಮಠ ಕೊಟ್ಟಿಲ್ಲ. ಶಾಲೆ-ಕಾಲೇಜ್ ನಿರ್ಮಿಸಿಲ್ಲ. ಹಗಲು ದರೋಡೆ ಮಾಡಿ ಓಟು ಹಾಕಿಸಿಕೊಂಡ ದೇಶ ಕಂಡ ಒಬ್ಬ ಹೀನ ಮನಃಸ್ಥಿತಿಯ ರಾಜಕಾರಣಿ ಕೇಜ್ರೀವಾಲ್. ಹೀಗಾಗಿ ಇದೀಗ ದೇಶದ ಜನ ಜಾಗೃತರಾಗಿ ಅವರಿಗೆ ಪಾಠ ಕಲಿಸಿದ್ದಾರೆ ಎಂದರು.
ದೇಶಕ್ಕೊಂದು ಕೆಟ್ಟ ಪರಿಸ್ಥಿತಿಯನ್ನು ಆಪ್ ತಂದೊಡ್ಡಿತು. ಕೇಜ್ರಿವಾಲ್ ಪುಕ್ಸಟ್ಟೆ ಕೊಟ್ಟು ದೇಹಲಿ ಗೆದ್ದರು. ಬಳಿಕ ಪಂಜಾಬ್ ಗೆದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಕೂಡ ಅದನ್ನೇ ಅನುಸರಿಸಿತು. ಇದೊಂದು ಕೆಟ್ಟ ಸಂಪ್ರದಾಯ. ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಬೇಕಾಗುತ್ತದೆ. ಹೇಗೆ ನಮ್ಮ ಪೂರ್ವಜರು 1982ರ ಅವಧಿಯಲ್ಲಿ ಪಾರದರ್ಶಕವಾಗಿ ಚುನಾವಣೆ ಮಾಡಿದ್ದಾರೋ ಆ ರೀತಿ ಚುನಾವಣೆ ಮಾಡಬೇಕು. ಇದೀಗ ಅಂಥದ್ದೇ ಚುನಾವಣೆ ದೆಹಲಿಯಲ್ಲಿ ಆಗಿದೆ ಎಂದರು.