ಎಕ್ಸ್‌ಪ್ರೆಸ್ ಕೆನಾಲ್ ಕೈಬಿಡಲು ನಿರ್ಧಾರ : ಸಂಸದ ಜಿ.ಎಸ್.ಬಸವರಾಜು

Hema canal
Published on

ತುಮಕೂರು: ರಾಮನಗರ ಜಿಲ್ಲೆಗೆ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗಲು ಹಿಂದಿನ ಸಮ್ಮಿಶ್ರ ಸರ್ಕಾರ ರೂಪಿಸಿದ್ದ ಅವೈಜ್ಞಾನಿಕ ಯೋಜನೆ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ಮಾಹಿತಿ ನೀಡಿದರು. ಆ ಯೋಜನೆ ಕಾರ್ಯಗತಗೊಂಡಿದ್ದರೆ, ತುಮಕೂರು ಜಿಲ್ಲೆಗೆ ಮರಣ ಶಾಸನವಾಗುತ್ತಿತ್ತು. ಇದನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿಯೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಣಿಗಲ್ ಮತ್ತು ರಾಮನಗರ ಜಿಲ್ಲೆಯ ಜನರಿಗೂ ಅನುಕೂಲವಾಗುವಂತೆ ಹೊಸ ಯೋಜನೆ ರೂಪಿಸಲಾಗಿದ್ದು, ತುಮಕೂರು ನಾಲೆಯ 0-166.9 ಕಿ.ಮೀ.ವರೆಗೂ ಆಧುನೀಕರಣಕ್ಕೆ 475 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು. ಕುಮಾರಧಾರಾದಿಂದ ಗುರುತ್ವಾಕರ್ಷಣೆ ಮೂಲಕ 8 ಟಿಎಂಸಿ ನೀರು ಹರಿಸಿ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಪಾವಗಡ ಭಾಗಕ್ಕೆ ಹರಿಸುವ ಯೋಜನೆ ಕೂಡ ಮುಂದಿನ ದಿನದಲ್ಲಿ ಸಾಕಾರವಾಗಲಿದೆ ಎಂದರು.

ಪ್ರಧಾನಿ ಅಭ್ಯರ್ಥಿ ಆಗುವವರಿಗೆ ಅರ್ಹತೆ ಇರಬೇಕು: ಪ್ರಧಾನಿಯಾಗಲು ಭಾರತೀಯ ಪ್ರಜೆಯಾಗಿರಬೇಕು, ಅರ್ಹತೆ ಇರಬೇಕು ಎಂದು ಹೇಳುವ ಮೂಲಕ ಸಂಸದ ಜಿ.ಎಸ್.ಬಸವರಾಜು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ವಿರುದ್ಧ ಹರಿಹಾಯ್ದರು. ‘ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಯ್ತು?’ ಎಂದು ರಾಹುಲ್‌ಗಾಂಧಿ ಮಾಡಿರುವ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಆಗಲು ಬಯಸುವವರಿಗೆ ಅರ್ಹತೆ ಇರಬೇಕು ಎಂದು ಮೂದಲಿಸಿದರು. ದಾಳಿಯನ್ನು ರಾಹುಲ್ಗಾಂಧಿ ಮಾಡಿಸಿರಬೇಕು, ಸೈದ್ಧಾಂತಿಕ ಬದ್ಧತೆ, ಅರಿವು ಇದ್ದವರಿಗೆ ಏನಾದರೂ ಹೇಳಬಹುದು ರಾಹುಲ್ಗಾಂಧಿಗೆ ಯಾವುದೂ ಇಲ್ಲ ಎಂದರು.

ನಿಷೇಧಾಜ್ಞೆ ಅನಿವಾರ್ಯವಾಗಿತ್ತು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಿಷೇಧಾಜ್ಞೆ ‘ಕಾನೂನು ಬಾಹಿರ’ ಎಂಬ ಹೈಕೋರ್ಟ್ ತೀರ್ಪಿನ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಂತಿ ಕದಡುವ ದುಷ್ಟರಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಡ್ವ, 500 ಬಾಡಿಗೆ ಗೂಂಡಾಗಳನ್ನು ಕರೆತಂದು ಬೆಂಕಿ ಇಟ್ಟರೆ ಯಾರು ಕಾಯ್ತರೆ, ಅವರನ್ನು ನಿಯಂತ್ರಣ ಮಾಡೋದು ಬೇಡವೇ ಎಂದು ಮರು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಗೌರವವಿದೆ, ಜಿಲ್ಲೆಗೆ ಅವರು ಮಾಡಿದ್ದಕ್ಕೆ ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ. ಅಭಿವೃದ್ಧಿ ವಿಷಯವಾಗಿ ಜಿಲ್ಲೆಯಲ್ಲಿ ಪ್ರವಾಸ ನಡೆಸಿದರೆ ಅವರ ಜತೆ ಹೋಗುತ್ತೇನೆ. ಜಿ.ಎಸ್.ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net