

ತುಮಕೂರು: ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೇಮೆ ನೀರು ಹರಿಸುವಂತೆ ಸಂಸದ ಜಿ.ಎಸ್.ಬಸವರಾಜು ನೇತೃತ್ವದ ಬಿಜೆಪಿ ಶಾಸಕರ ನಿಯೋಗ ಸಿಎಂ ಬಿ.ಎಸ್.ಯಡಿಯೂರಪ್ಪ ಮೊರೆ ಹೋಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮದಂತೆ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಈ ವರ್ಷದ ಪಾಲಿನ ಹೇಮೆ ನೀರನ್ನು ಮೇ 31ರವರೆಗೆ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿಗದಿಯಾಗಿರುವ 25.3 ಟಿಎಂಸಿ ಪ್ರಮಾಣದ ನೀರಿನಲ್ಲಿ ಈವರೆಗೆ 18 ಟಿಎಂಸಿ ನೀರು ಪಡೆಯಲಾಗಿದೆ. ಇನ್ನೂ 7 ಟಿಎಂಸಿ ನೀರು ಬಾಕಿ ಇದ್ದು, ಮೇ 31ರೊಳಗೆ ಜಿಲ್ಲೆಗೆ ಹರಿಸಬೇಕು. ಜೂನ್ 1ರ ಬಳಿಕ ನೀರು ಬಿಟ್ಟರೆ ಮುಂದಿನ ವರ್ಷದ ಲೆಕ್ಕಕ್ಕೆ ಸೇರಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ನೇತೃತ್ವದ ನಿಯೋಗವು ಸಿಎಂಗೆ ಮನವರಿಕೆ ಮಾಡಿಕೊಟ್ಟಿದೆ.
ಪಾವಗಡ ಹೊರತುಪಡಿಸಿ ತುಮಕೂರು ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಹೇಮೆ ನೀರು ಪೂರೈಕೆಯಾಗುತ್ತಿದ್ದು, ಈಗ ಎಲ್ಲೆಡೆ ಕುಡಿಯುವ ನೀರಿನ ಹಾಹಾಕಾರವೆದ್ದಿದೆ. ಹಾಗಾಗಿ, ಹೇಮಾವತಿ ಜಲಾಶಯದಿಂದ ಜಿಲ್ಲೆಯ ಪಾಲಿನ ಉಳಿಕೆ ನೀರನ್ನು ಶೀಘ್ರ ಬಿಡುಗಡೆ ಮಾಡುವ ಮೂಲಕ ನೀರಿನ ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಗಿದೆ. ಅಲ್ಲದೆ, ಹಾಸನ, ಮಂಡ್ಯ ಜಿಲ್ಲೆಗೆ ನೀರು ನೀಡಲು ತಮ್ಮದೇನು ಅಭ್ಯಂತರವಿಲ್ಲವೆಂದೂ ನಿಯೋಗ ಸ್ಪಷ್ಟಪಡಿಸಿದೆ.
ಸಿಎಂ ಸ್ಪಂದನೆ: ಬಿಜೆಪಿ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದು, ಈ ಬಗ್ಗೆ ಪ್ರಾಧಿಕಾರ ಹಾಗೂ ಹೇಮಾವತಿ ಜಲಾಶಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕುಡಿಯುವ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಹೇಮೆ ನೀರು ಹರಿಸುವ ಬಗ್ಗೆ ನಿಖರವಾಗಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಸದರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗವು ಸಿಎಂ ಭೇಟಿ ಮಾಡಿ ಕುಡಿಯುವ ನೀರಿಗೆ ಹೇಮೆ ಹರಿಸುವಂತೆ ಮನವಿ ಮಾಡಿದೆ. ಮೇ 31ರೊಳಗೆ ನೀರು ಪಡೆಯದಿದ್ದರೆ ಈ ವರ್ಷದ ನಮ್ಮ ಕೋಟಾ ವ್ಯರ್ಥವಾಗಲಿದೆ. ಈ ನಿಟ್ಟಿನಲ್ಲಿ ನೀರು ಬಿಡಿಸಿಕೊಳ್ಳಲು ಪ್ರಯತ್ನ ಮಾಡಲಾಗುವುದು. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ತುಮಕೂರು ನಗರಕ್ಕೆ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ 50 ಎಂಸಿಎಫ್‌ಟಿಯಷ್ಟು ನೀರು ಮಾತ್ರ ಇದೆ. 15 ದಿನಕ್ಕಷ್ಟೇ ಈ ನೀರು ಸಾಕಾಗಲಿದೆ. ನಂತರದ ದಿನಗಳು ಕಷ್ಟಕರವಾಗಲಿದೆ. ಶೀಘ್ರ ಹೇಮೆ ನೀರು ಹರಿಸಲು ಸೂಚನೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ ನಮ್ಮ ಪಾಲಿನ 7 ಟಿಎಂಸಿ ನೀರನ್ನು ಹೇಮಾವತಿ ಜಲಾಶಯದಿಂದ ಬಿಡುವಂತೆ ಸಿಎಂಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಸನ, ಮಂಡ್ಯದವರಿಗೆ ಕೊಟ್ಟರೆ ನಮ್ಮದೇನೂ ಅಭ್ಯಂತರ ಇಲ್ಲ. ಮಸಾಲಜಯರಾಂ ತುರುವೇಕೆರೆ ಶಾಸಕ