ಗುರಿ ಸಾಧಿಸದ ಇಲಾಖೆಗಳು ; ಅಧಿಕಾರಿಗಳ ವಿರುದ್ಧ ಸಂಸದ ಜಿ.ಎಸ್.ಬಸವರಾಜು ಅಸಮಾಧಾನ

30TMK_DISHA_Meeting 1
Published on

ತುಮಕೂರು: ಕೇಂದ್ರದಿಂದ ಹಣ ಬಿಡುಗಡೆಯಾಗಿದ್ದರೂ ಕೆಲವು ಇಲಾಖೆಗಳು ನಿರೀಕ್ಷಿತ ಗುರಿ ಸಾಧಿಸಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ(ದಿಶಾ) ಪರಿಶೀಲನಾ ಸಭೆಯಲ್ಲಿ ಮಾತನಾಡಿ ದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಎಲ್ಲ ಇಲಾಖೆಗಳು ಅನುಷ್ಠಾನ ಮಾಡುವ ಯೋಜನೆ ಗಳ ಮಾಹಿತಿಯನ್ನು ಜಿಐಎಸ್ ಪೋರ್ಟಲ್‌ಗೆ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಜಿಐಎಸ್ ನೆರವಾಗಲಿದ್ದು, ಪ್ರತೀ ಇಲಾಖೆಯೂ ಒಬ್ಬ ನೋಡಲ್ ಅಧಿಕಾರಿ ನೇಮಿಸಿ ಪಟ್ಟಿಯನ್ನು ಜಿಪಂ ಸಿಇಒಗೆ ನೀಡಿ. ಸ್ತ್ರೀಶಕ್ತಿ ಸಂಘ ಹಾಗೂ ಸ್ವಶಕ್ತಿ ಸಂಘಗಳ ಒಕ್ಕೂಟ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಫಾರ್ವರ್ಡ್ ಮತ್ತು ಬ್ಯಾಕ್ವರ್ಡ್ ಲಿಂಕೇಜ್‌ನಡಿ ಸಂಘವಾರು ಉತ್ಪನ್ನಗಳ ಮಾಹಿತಿ ಇರಬೇಕು ಎಂದರು.

ತುಮಕೂರು-ದಾವಣಗೆರೆ, ತುಮಕೂರು- ರಾಯದುರ್ಗ, ತುಮಕೂರು-ಅರಸೀಕೆರೆ ದ್ವಿಪಥ ರೈಲ್ವೆ ಯೋಜನೆ, ಸಿದ್ಧಗಂಗಾ ಮಠದ ಬಳಿ ರೈಲ್ವೆ ಮೇಲ್ಸೇತುವೆ, ಮತ್ತಿತರ ರೈಲ್ವೆ ಇಲಾಖೆ ಯೋಜನೆ ಕೂಡಲೇ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು. ಗ್ರಾಮೀಣ ಭಾಗದಲ್ಲಿ ಗೋದಾಮು, ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ನಿವೇಶನ ಗುರುತಿಸಲು ನಬಾರ್ಡ್, ಎಪಿಎಂಸಿ, ತೋಟಗಾರಿಕೆ, ಕೃಷಿ ಇಲಾಖೆಗಳ ಅಧಿಕಾರಿಗಳ ಜಂಟಿ ಸಮಿತಿ ರಚಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಲ್ಲಾ ಪಂಚಾಯಿತಿ ಸಿಇಒ ಶುಭಾಕಲ್ಯಾಣ್‌ಗೆ ಸಂಸದರು ಸೂಚಿಸಿದರು. ಕೇಂದ್ರದಿಂದ ಅನುದಾನ ಮಂಜೂರಾಗಿದ್ದರೂ ರಾಜ್ಯ ಸರ್ಕಾರದ ಇಲಾಖೆಗಳೇ ಅನುಷ್ಠಾನಕ್ಕೆ ತರಬೇಕಾಗಿರುವುದರಿಂದ ಇಲಾಖಾಧಿಕಾರಿಗಳು ವಿಶೇಷ ಆಸಕ್ತಿವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಮೊಬೈಲ್ ಮಣ್ಣು ಪರೀಕ್ಷಾ ಪ್ರಯೋಗಾಲಯ ಒದಗಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ 16 ಡೆಂಗೆ , 52 ಚಿಕುನ್‌ಗುನ್ಯಾ ಹಾಗೂ 1 ಮಲೇರಿಯಾ ಪ್ರಕರಣ ವರದಿಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯಾಧಿಖಾರಿ ಡಾ.ಕೇಶವ್‌ರಾಜ್ ತಿಳಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ, ಮೇಯರ್ ಫರೀದಾ ಬೇಗಂ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕಳೆದ ವರ್ಷ 40181 ರೈತರಿಗೆ 42.36 ಕೋಟಿ ರೂ. ವಿಮಾ ಸೌಲಭ್ಯ ಒದಗಿಸಲಾಗಿದೆ. ರಾಜ ಸುಲೋಚನಾ ಕೃಷಿ ಜಂಟಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net