

ರಾಯಚೂರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಕಲಚೇತನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅವುಗಳ ಬಗ್ಗೆ ವಿಕಲಚೇತನರಿಗೆ ಸರಿಯಾಗಿ ಮಾಹಿತಿ ನೀಡಬೇಕೆಂದು ಜಿ.ಕುಮಾರ್ ನಾಯಕ ಹೇಳಿದರು.
ನಗರದ ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಪ್ರಾದೇಶಿಕ ಕೇಂದ್ರ, ಕೌಶಲ್ಯಾವೃದ್ಧಿ ಪುನರ್ವಸತಿ ಮತ್ತು ವಿಕಲಚೇತನರ ಸಬಲೀಕರಣ, ನೈಪಿಡ್, ವೈದ್ಯಕೀಯ ಮೆಡಿಕಲ್ ಕಾಲೇಜು, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ನೇರಳೆ ಮೇಳ ,ವಿಕಲಚೇತನರಿಗೆ ಉದ್ಯೋಗ ಮೇಳ ,ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ವೃತ್ತಿಪರ ತರಬೇತಿ, ಉದ್ಯೋಗ, ಸಾಮಾಜಿಕ ಭದ್ರತೆ, ಸಮಾನ ಹಕ್ಕುಗಳನ್ನು ಒದಗಿಸಿ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ವಿಕಲಚೇತನರಿಗಾಗಿ ಸರ್ಕಾರ ಜಾರಿ ತಂದಿದೆ.
ವಿಕಲಚೇತನರಿಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗಾವಕಾಶ ಮತ್ತು ತರಬೇತಿ ಒದಗಿಸುವುದರ ಜತೆಗೆ ಅವಶ್ಯಕ ಸಾಧನ ಸಲಕರಣೆ ಪೂರೈಕೆ ಮಾಡುವ ಮೂಲಕ ಸಮಾಜದಲ್ಲಿ ಘನತೆ, ಗೌರವದಿಂದ ಬಾಳಲು ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು. ನೇರಳೆ ಮೇಳವು ದೇಶಾದ್ಯಂತ ನಡೆಯುತ್ತಿದ್ದು, ಕರ್ನಾಟಕದ ರಾಜ್ಯದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ಈ ಮೇಳ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಈ ಭಾಗದ ಪ್ರಗತಿ ಕಡಿಮೆಯಿದೆ. ಈ ಭಾಗದಲ್ಲಿ ತಾಯಿ ಮತ್ತು ಮಕ್ಕಳ ಮರಣದ ಪ್ರಮಾಣ ಕಡಿಮೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರಿದ್ದು, ಅವರಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಇತರೆ ಸಂಸ್ಥೆಗಳ ಸೇವಾ ಮನೋಭಾವನೆ ಮೆಚ್ಚುವಂತದ್ದು, ನಿಮ್ಮ ನಿಮ್ಮ ಸೇವೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಮನೋವೈದ್ಯ ಡಾ.ರಮೇಶ ಬಾಬು ಮಾತನಾಡಿದರು.
ವಿಕಲಚೇತನರ ಸಾಧನ ಸಲಕರಣೆಗಳ ಪ್ರದರ್ಶನ ನಗರದ ರಿಮ್ಸ್‌ಮೆಡಿಕಲ್ ಕಾಲೇಜಿನಲ್ಲಿ ಶ್ರೀ ಮಾಣಿಕ್ಯಪ್ರಭು ಅಕಾಡೆಮಿ ಫಾರ ದಿ ಬ್ಲೈಡ್, ಎಪಿಡಿ ಸಂಸ್ಥೆಗಳು ಸೇರಿದಂತೆ ಸುಮಾರು 15 ಸಂಸ್ಥೆಗಳು ಮೇಳದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರಿಗೆ ಬೇಕಾಗುವ ಸಲಕರಣೆಗಳ ಕುರಿತು ವಸ್ತು ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು. ಮೇಳದಲ್ಲಿ ಸುಮಾರು 523 ಜನರು ನೋಂದಣಿಯಾಗಿದ್ದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪವನ ಕಿಶೋರ್ ಪಾಟೀಲ್, ಜಯಂತರಾವ್ ಪತಂಗೆ, ರಿಮ್ಸ್ ಸಂಸ್ಥೆಯ ನಿರ್ದೇಶಕ ಡಾ. ರಮೇಶ್ ಬಿ.ಹೆಚ್., ಜಿಲ್ಲಾ ವಿಕಲಚೇತನರ ಇಲಾಖೆಯ ಅಧಿಕಾರಿ ಶ್ರೀದೇವಿ, ಪ್ರಾಂಶುಪಾಲ ಡಾ.ರಾಹುಲ್ ಕೀರ್ತಿ, ಪಾಲಿಕೆಯ ವಲಯ ಆಯುಲ್ತ ಮಲ್ಲಿಕಾರ್ಜುನ, ಸಿಆರ್‌ಸಿ ಸಂಸ್ಥೆಯ ಮುಖ್ಯಸ್ಥ ತಾಮರ ಸೆಲ್ವನ ಸೇರಿ ಅನೇಕರು ಇದ್ದರು.