ಸಂಸತ್ ಅಖಾಡದಲ್ಲಿ ಯಾರಿಗೆ ಸಿಗಲಿದೆ ಸಕ್ಕರೆನಾಡಿನ ಸಿಹಿ?: ಜೆಡಿಎಸ್‌ಗೆ ಅಸ್ಥಿತ್ವ, ಕಾಂಗ್ರೆಸ್‌ಗೆ ಪ್ರತಿಷ್ಠೆ

MP Election Vote Counting Mandya
Published on

ಮಂಡ್ಯ: ಎರಡು ಬಾರಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಗೆ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಈ ಬಾರಿ ವಿಜಯಮಾಲೆ ಯಾರಿಗೆ ಎನ್ನುವ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ. ಪ್ರಮುಖವಾಗಿ ಈ ಚುನಾವಣೆ ಜೆಡಿಎಸ್ ಪಾಲಿಗೆ ಮಹತ್ವದಾಗಿದ್ದು, ಜಿಲ್ಲೆಯಲ್ಲಿ ಅಸ್ಥಿತ್ವದ ಪ್ರಶ್ನೆಯಾಗಿದೆ.
ರಾಜಕೀಯವೇ ಹಾಸುಹೊದ್ದು ಮಲಗಿರುವ ಮಂಡ್ಯ ಕ್ಷೇತ್ರ ಮತ್ತೊಮ್ಮೆ ಸದ್ದು ಮಾಡಲು ಸಿದ್ಧವಾಗಿದೆ. ಪ್ರತಿಷ್ಠೆಯ ರಾಜಕಾರಣಕ್ಕೆ ಯಾವಾಗಲೂ ಹೆಸರುವಾಸಿಯಾಗಿರುವ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಂಜಾತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸ್ಟಾರ್ ಚಂದ್ರು ನಡುವೆ ನೇರ ಹಣಾಹಣಿ ನಡೆದಿದೆ.

ಅಂದಾಜಿಗೆ ಸಿಗದ ಫಲಿತಾಂಶ: ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆಯ ಫಲಿತಾಂಶವನ್ನು ಊಹಿಸಲು ಸಾಧ್ಯವಾಗದಂತಹ ಸ್ಥಿತಿ ಇದೆ. ಕಾರಣ ಎರಡು ಪಕ್ಷದ ನಡುವಿನ ಜಿದ್ದಾಜಿದ್ದಿ. ಮಾತ್ರವಲ್ಲದೆ ಈ ಬಾರಿ ಜಾತಿ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಇದರಿಂದಾಗಿ ಬೆಟ್ಟಿಂಗ್ ಭರಾಟೆ ಕೂಡ ಅಷ್ಟೊಂದು ಮಹತ್ವ ಪಡೆದುಕೊಳ್ಳಲಿಲ್ಲ.
ಇನ್ನು ಮೇಲ್ನೋಟಕ್ಕೆ ಎಚ್‌ಡಿಕೆ ವರ್ಸಸ್ ಸ್ಟಾರ್ ಚಂದ್ರು ನಡುವಿನ ಸ್ಪರ್ಧೆ ಎನಿಸಿದರೂ, ನಿಜವಾಗಿ ಎಚ್‌ಡಿಕೆ ವರ್ಸಸ್ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆ ಕಣವಾಗಿದೆ. ಸತತವಾಗಿ ಚುನಾವಣೆಗಳಲ್ಲಿ ಸೋಲು ಕಂಡಿರುವ ಜೆಡಿಎಸ್‌ಗೆ ಈ ಲೋಕಸಭಾ ಚುನಾವಣೆ ಅಸ್ಥಿತ್ವದ ಪ್ರಶ್ನೆಯಾಗಿದೆ. ಈ ಕಾರಣಕ್ಕೆ ಮಾಜಿ ಸಿಎಂ ಅವರೇ ಅಖಾಡ ಪ್ರವೇಶಿಸಿದರು. ಇತ್ತ ಜೆಡಿಎಸ್‌ಗೆ ಜಿಲ್ಲೆಯಲ್ಲಿ ದೊಡ್ಡಮಟ್ಟದ ಹೊಡೆತ ನೀಡಲು ಕಾಂಗ್ರೆಸ್ ಕೂಡ ತಂತ್ರಗಾರಿಕೆ ನಡೆಸಿತು. ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಏಳರಲ್ಲಿ ಕಾಂಗ್ರೆಸ್ ಹಾಗೂ ಇಬ್ಬರು ಎಂಎಲ್‌ಸಿಗಳಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಬಲಿಷ್ಟವಾಗಿ ಕಾಣಿಸಿದೆ.
ಇನ್ನು ಜೆಡಿಎಸ್-ಬಿಜೆಪಿ ಮೈತ್ರಿ ಕ್ಷೇತ್ರದಲ್ಲಿ ವರ್ಕೌಟ್ ಆದಂತೆ ಕಾಣಿಸಿತ್ತು. ಎರಡು ಪಕ್ಷದ ನಾಯಕರ ನಡುವೆ ಮನಸ್ಥಾಪ ಕಂಡುಬರಲಿಲ್ಲ. ಬಿಜೆಪಿಯ ಘಟಾನುಘಟಿ ನಾಯಕರೇ ಖುದ್ದು ಎಚ್‌ಡಿಕೆ ಪ್ರಚಾರ ನಡೆಸಿದ್ದರು. ಬಿಜೆಪಿಯ ಸಾಂಪ್ರದಾಯಿಕ ಮತಗಳು ಎಚ್‌ಡಿಕೆ ಕೈಹಿಡಿದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಕೂಡ ಸುಮ್ಮನೆ ಚುನಾವಣೆ ಮಾಡಲಿಲ್ಲ. ಬದಲಿಗೆ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಿತ್ತು. ಕಾಂಗ್ರೆಸ್‌ನ ಯುವ ನಾಯಕ ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡ್ಯ ಅಖಾಡದಲ್ಲಿ ಭರ್ಜರಿ ಮತಯಾಚನೆ ಮಾಡಿದ್ದರು.

ಎರಡು ಪಕ್ಷಕ್ಕೂ ಗೆಲುವಿನ ವಿಶ್ವಾಸ
ಮತದಾನದ ಬಳಿಕ ಗೆಲುವಿನ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಅಂತೆಯೇ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆ, ಅಹಿಂದ ಮತಗಳು ಕೈಹಿಡಿದಿವೆ ಎನ್ನುವ ಸಂಪೂರ್ಣ ಭರವಸೆ ಇದೆ. ಆದ್ದರಿಂದ ಕನಿಷ್ಟ 50 ಸಾವಿರ ಮತಗಳ ಅಂತರದಲ್ಲಿಯಾದರೂ ಗೆಲ್ಲುತ್ತೇವೆನ್ನುವ ವಿಶ್ವಾಸದಲ್ಲಿದ್ದಾರೆ. ಆದಾಗ್ಯೂ ಕಾವೇರಿ ನೀರಿನ ವಿಷಯದ ಜತೆಗೆ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಕೆಲ ಸಮುದಾಯ ಮೈತ್ರಿ ಬೆಂಬಲಕ್ಕೆ ನಿಂತಿವೆ ಎನ್ನುವ ಆತಂಕವೂ ಇದೆ.
ಇತ್ತ ಜೆಡಿಎಸ್‌ಗೂ ಅಚಲ ವಿಶ್ವಾಸವಿದ್ದು, ಕನಿಷ್ಟ ಒಂದು ಲಕ್ಷಕ್ಕೂ ಹೆಚ್ಚು ಮತದ ಅಂತರದಲ್ಲಿ ಗೆಲುವು ಶತ ಸಿದ್ಧ ಎನ್ನುತ್ತಿದೆ. ಮೈತ್ರಿ ಕಾರ್ಯಕರ್ತರು ಚುನಾವಣೆ ಯಶಸ್ವಿಯಾಗಿ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್ ವಿರುದ್ಧವಿರುವ ಸಮುದಾಯದ ಬೆಂಬಲ ಮೈತ್ರಿಗೆ ಸಿಕ್ಕಿದೆ ಎನ್ನುವ ಭರವಸೆ ಇದೆ. ಇದರೊಟ್ಟಿಗೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ಎಚ್‌ಡಿಕೆ ಕೇಂದ್ರ ಸಚಿವರಾಗುತ್ತಾರೆನ್ನುವ ಮಾತು ್ಲಸ್ ಆಗಿದೆ ಎನ್ನುವುದು ಜೆಡಿಎಸ್ ಮತ್ತು ಬಿಜೆಪಿ ನಂಬಿಕೆ.

ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ?
ಈ ಚುನಾವಣೆಯಲ್ಲಿ ಕ್ಷೇತ್ರದ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ ಸಿಕ್ಕಿದೆ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಅಂತೆಯೇ ಮತದಾನ ಪ್ರಮಾಣದಲ್ಲಿಯೂ ಗೃಹಲಕ್ಷ್ಮೀಯರೇ ಮುಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸಾಂಪ್ರದಾಯಕ ಮತ ಬಂದಿವೆಯಾದರೂ ಮಹಿಳೆಯರು ಯಾರನ್ನು ಬೆಂಬಲಿಸಿದ್ದಾರೆನ್ನುವ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮಾತ್ರವಲ್ಲದೆ ಮಂಡ್ಯ ಫಲಿತಾಂಶದ ಬಗ್ಗೆ ಯಾರನ್ನೇ ಕೇಳಿದರೂ ಮಹಿಳಾ ುತದಾರರು ಬೆಂಬಲಿಸಿದವರೇ ಗೆಲ್ಲುತ್ತಾರೆಂದು ಹೇಳುತ್ತಿದ್ದಾರೆ.
ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ ಯೋಜನೆಯಡಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಇದಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಂದು ಲಕ್ಷ ರೂ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ಮಹಿಳೆಯರ ಬಲ ನಮಗೆ ಸಿಕ್ಕಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರ. ಇನ್ನು ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಮಹತ್ವದ ಯೋಜನೆಯನ್ನು ಎಚ್‌ಡಿಕೆ ಜಾರಿಗೊಳಿಸಿದ್ದರು. ಇದರಿಂದ ಎಷ್ಟೋ ಕುಟುಂಬ ಬೀದಿ ಪಾಲಾಗುವುದು ತಪ್ಪಿದೆ. ಇದಲ್ಲದೆ ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವು ಸಮುದಾಯ ಮಹಿಳೆಯರ ಬೆಂಬಲ ಮೈತ್ರಿ ಸಿಕ್ಕಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

ನಿರೀಕ್ಷೆ ಉಳಿಸುತ್ತಾ ಮಳವಳ್ಳಿ, ಮದ್ದೂರು
ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಎಂಟು ವಿಧಾನಸಭಾ ಕ್ಷೇತ್ರವಿದೆ. ಆದರೆ ಈ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿರುವುದು ಮಳವಳ್ಳಿ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಪೈಕಿ ಬೆಂಬಲಿತ ಸೇರಿದಂತೆ ಆರು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಆದರೂ ಲೋಕಸಭಾ ಚುನಾವಣೆ ಪೂರ್ವದಿಂದಲೂ ಮಳವಳ್ಳಿ, ಮದ್ದೂರು ಕಾಂಗ್ರೆಸ್ ಭದ್ರಕೋಟೆ ಎನ್ನುವಂತಹ ವಾತಾವರಣವಿತ್ತು. ಇದಕ್ಕೆ ಪೂರಕವೆನ್ನುವಂತೆ ಚುನಾವಣಾ ಚಟುವಟಿಕೆ ಈ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ನಡೆಯಿತು. ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಮ್ಮ ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ಕೊಡಿಸಲಿದ್ದಾರೆನ್ನುವ ಧೃಡ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ಈ ಕಾರಣಕ್ಕೆ ಉಳಿದ ಕ್ಷೇತ್ರಕ್ಕಿಂತ ಮಳವಳ್ಳಿ ಮೇಲೆ ಹೆಚ್ಚಿನ ಭರವಸೆ ಇದೆ.
ಇನ್ನು ಮದ್ದೂರು ಕ್ಷೇತ್ರವೂ ಕಾಂಗ್ರೆಸ್ ನಾಯಕರಿಗೆ ಅತೀವ ಭರವಸೆಯನ್ನು ಹುಟ್ಟಿಸಿದೆ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕೆ.ಎಂ.ಉದಯ್ ಶಾಸಕರಾಗಿ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ರಾಜಕೀಯವನ್ನು ಹೊರತುಪಡಿಸಿ ಸಾಮಾಜಿಕ ಚಟುವಟಿಕೆ ಮೂಲಕವೂ ಜನರಿಗೆ ಹತ್ತಿರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿಯೂ ಹೆಚ್ಚಿನ ಲೀಡ್ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆದರೆ ಮತದಾನದ ಹಿಂದಿನ ಕೆಲ ಮಹತ್ವದ ಬದಲಾವಣೆ ಎರಡು ಕ್ಷೇತ್ರದಲ್ಲಾಗಿವೆ. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸಿಕ್ಕಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜತೆಗೆ ಅಚ್ಚರಿಯ ಫಲಿತಾಂಶ ಬರಬಹುದೆನ್ನುವ ಸವಾಲು ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net