

ಹುಬ್ಬಳ್ಳಿ: ಹದಿನೈದು ದಿನ ಅಥವಾ ಒಂದು ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಬಹುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂಬುದು ಕೋಟ್ಯಂತರ ಜನರ ಕನಸು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದರು.
ಇಂಡಿಯಾ ಒಕ್ಕೂಟ ಪ್ರಾರಂಭಿಕ ಹಂತದಲ್ಲಿದ್ದ ಒಗ್ಗಟ್ಟಿನಿಂದ ಕೂಡಿತ್ತು. ಇದೀಗ ಬಿದ್ದು ಹೋಗಿದೆ. ನಿತೀಶ ಕುಮಾರ, ಮಮತಾ ಬ್ಯಾನರ್ಜಿ ಹೊರ ಬಂದಿದ್ದಾರೆ. ಇಂಡಿಯಾ ಒಕ್ಕೂಟ ಅಸ್ತಿತ್ವ ಕಳೆದುಕೊಂಡಿದೆ. ತೃತೀಯ ರಂಗ ಅನ್ನೋದು ಯಾವುದೂ ಇಲ್ಲ, ಇವಾಗ ಏನಿದ್ರೂ ಎನ್‌ಡಿಎ ಇಂಡಿಯಾ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈಸೂರು ಆಗಮನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಅಮಿತ್ ಶಾ ಅವರು ಸೂತ್ತೂರ ಮಠದ ಜಾತ್ರೆಗೆ ಬಂದಿದ್ದಾರೆ. ಮೈಸೂರು ಭಾಗದ ಪ್ರಮುಖರ ಜತೆಗೆ ಸಭೆ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಆದರೇ ಚುನಾವಣೆ ರಣಕಹಳೆ ಎಂಬುದು ಮಾಧ್ಯಮದ ಶಬ್ದ ಎಂದರು.
ಅಸಮಾಧಾನ: ಹು-ಧಾ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ಅವರು ಗೈರಾಗಿದ್ದರು. ಈ ಕಾರಣಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಬಿಜೆಪಿ ಮಾಜಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ದೂರು ನೀಡಿದ್ದರು. ಇದೀಗ ಸದಸ್ಯತ್ವದಿಂದಲ್ಲೂ ಕೂಡ ಸರಸ್ವತಿ ಅಮಾನತುಗೊಂಡಿದ್ದಾರೆ. ಕಾನೂನೂ ಹೋರಾಟವನ್ನು ಅವರು ಮಾಡಲಿದ್ದಾರೆ ಎಂದರು.
ಮೊನ್ನೆ ನಮ್ಮ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಸ್ ವಾಪಸ್ ಪಡೆಯೋ ಬಗ್ಗೆ ಚರ್ಚೆ ಮಾಡಿದ್ದರು. ಆದರೆ ಕೋರ್ಟ್ ತಡೆಯಾಗಿರೋ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯೆ ಅಮಾನತು ಆದೇಶ ಆಗಿದೆ. ನಾನು ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ವ್ಯಕ್ತಿ. ನಾನು ಎಲ್ಲರ ಜತೆಗೂ ಹೊಂದಿಕೊಳ್ಳುತ್ತೇನೆ. ಅವರು ಹೊಂದಿಕೊಳ್ಳುವುದಿಲ್ಲವೆಂದರೆ ನಾನೇನು ಮಾಡಲಿ? ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಕೆಲ ದಿನಗಳ ಹಿಂದೆ ಇಂಧೋರ್‌ಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ, ಯಾವ ನಾಯಕರನ್ನೂ ಭೇಟಿಯಾಗಿಲ್ಲ. ನಾನು ಯಾವ ಅಜೆಂಡಾ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ. ಹಿರಿಯರು ಗೌರವದಿಂದ ನಡೆಸಿಕೊಳ್ಳುತ್ತೇನೆ ಎಂದರು ಹಾಗಾಗಿ ವಾಪಸ್ ಬಿಜೆಪಿಗೆ ಬಂದಿದ್ದೇನೆ ಎಂದರು.