

ಮೈಸೂರು: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಬೇಕು ಹುಣಸೂರು ಮತ್ತು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಎ.ಸುರೇಶ್ ಸಹಾಯಕ ವೆಚ್ಚ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಾಯಕ ವೆಚ್ಚ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದಂತೆ ಅಭ್ಯರ್ಥಿಗಳು ಹಣ ವೆಚ್ಚ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್‌ಗಳು, ವಿಡಿಯೋ ಸರ್ವೆಲೆನ್ಸ್, ವಿಡಿಯೋ ವೀವಿಂಗ್ ತಂಡಗಳು, ಸ್ಟಾೃಟಿಕ್ ಸರ್ವೆಲೆನ್ಸ್ ತಂಡಗಳು ಮತ್ತಷ್ಟು ಜಾಗೃರಾಗಿ ಕಾರ್ಯನಿರ್ವಹಿಸಬೇಕು. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿ ಸಬೇಕು ಎಂದರು.
ಚುನಾವಣಾ ಖರ್ಚು ವೆಚ್ಚದ ನಿಗಾ ಕುರಿತು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಎಇಆರ್‌ಒ ಅಧಿಕಾರಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಸಿದ್ಧತೆ ಮಾಡಿಕೊಡಿದ್ದಾರೆ. ಚುನಾವಣಾ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಖರ್ಚು ವೆಚ್ಚಗಳ ಬಗ್ಗೆ ಗಮನ ವಹಿಸಬೇಕು ಎಂದು ಹೇಳಿದರು.
ಚುನಾವಣಾ ಅಭ್ಯರ್ಥಿ ಪ್ರಚಾರಕ್ಕಾಗಿ ಬಂದಂತಹ ಸಂದರ್ಭದಲ್ಲಿ ಅಲ್ಲಿನ ಕಾರ್ಯಕ್ರಮದ ಖರ್ಚುವೆಚ್ಚದ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಅನಧಿಕೃತ ಮದ್ಯ ಸಾಗಾಣಿಕೆ ತಡೆಗಟ್ಟಲು ಕ್ರಮ ವಹಿಸಬೇಕು. ಪ್ರತಿಯೊಂದು ಚೆಕ್‌ಪೋಸ್ಟ್‌ನಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಸೂಕ್ಷ್ಮ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿಕೊಂಡು ಅಬಕಾರಿ ಇಲಾಖೆಯವರು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ವಹಿಸಬೇಕು. ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ವಹಿವಾಟು, ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ ಹೆಚ್ಚಿನ ಖಾತೆಗಳಿಗೆ ಹಣ ವರ್ಗಾವಣೆ ಕುರಿತಂತೆ ಪ್ರತಿದಿನ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು, ಅಕೌಂಟಿಂಗ್ ತಂಡದಿಂದ ಶ್ಯಾಡೋ ರಿಜಿಸ್ಟರ್ ಸೇರಿದಂತೆ ವಿವಿಧ ಕಡತ ನಿರ್ವಹಣೆಯ ಬಗ್ಗೆ, ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಅನುಮತಿ ನೀಡಲು ತೆರೆದಿರುವ ಏಕಗವಾಕ್ಷಿ ಕೇಂದ್ರ ಸೇರಿದಂತೆ ಕೈಗೊಂಡಿರುವ ವಿವಿಧ ಸಿದ್ಧತೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಅಧಿಕಾರಿಗಳು ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರಗಳು ಇರಬೇಕು. ಈ ಸಂಬಂಧ ಯಾವುದೇ ಗೊಂದಲಕ್ಕೆ ಒಳಗಾ ಗದೇ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಸಭೆಯ ನಂತರ ವೆಚ್ಚ ವೀಕ್ಷಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕಂಟ್ರೋಲ್ ರೂಂ, ಮಾಧ್ಯಮ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ಇತರರು ಇದ್ದರು.