ಹೆಗ್ಡೆಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ: ಮೋಟಮ್ಮ

udp-15-hegde
Published on

ಉಡುಪಿ: ದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಸಂಕಷ್ಟಗಳನ್ನು ಎದುರಿಸುತ್ತಿದ್ದ ಜನರಿಗೆ ಎಲ್ಲವೂ ಅರಿವಾಗಿದೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ.

ಮೂಡಿಗೆರೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್​ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯೇ ಈಗ ಗ್ಯಾರೆಂಟಿ ಯೋಜನೆಗಳನ್ನು ನಕಲು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳಿನ ಸರಕುಗಳು ಈಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ಸರ್ಕಾರ ದೀವಾಳಿಯಾಗುತ್ತದೆ ಎನ್ನುವ ಬಿಜೆಪಿಗರು ಕಾಪೋರ್ರೆಟ್​ ಕುಳಗಳ 11 ಲಕ್ಷ ಕೋಟಿ ರೂ. ಸಾಲ ಮನ್ನ ಮಾಡಿದ್ದಾರೆ. ಇದರಿಂದ ದೇಶ ದೀವಾಳಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಗ್ಯಾರೆಂಟಿ ಯೋಜನೆ ಪಡೆದರೆ ಮಹಿಳೆಯರು ಹಾದಿ ತಪ್ಪುತ್ತಾರೆ ಎಂದಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ. ನಮ್ಮ ರಾಜ್ಯದ ಮಹಿಳೆಯರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಹುಂಡಿಗೂ ಹಣ ಹಾಕಿದ್ದಾರೆ. ಇದರಿಂದ ಅವರ ಮನಸ್ಸಿಗೂ ನೆಮ್ಮದಿ ಸಿಕ್ಕಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಕಾಂಗ್ರೆಸ್​ ಅಭ್ಯರ್ಥಿ ಕೆ. ಜಯಪ್ರಕಾಶ್​ ಹೆಗ್ಡೆ ಮಾತನಾಡಿ, ಈ ಹಿಂದೆಯೂ ಅವಕಾಶ ನೀಡಿದ ಬಳಿಕ ಅಲ್ಪ ಅವಧಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈಗ ಮತ ಕೇಳಲು ಹೋದಾಗ ಜನ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಎಲ್ಲರೂ ಒಮ್ಮತದಿಂದ ಕಾಂಗ್ರೆಸ್​ ಪಕ್ಷಕ್ಕೆ ಮತ ನೀಡಬೇಕಾದ ಅಗತ್ಯ ಎದುರಾಗಿದೆ ಎಂದರು.

ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕಳೆಗುಂದುತ್ತಿದೆ. ಯುವ ಕಾರ್ಯಕರ್ತರು ಬಿಜೆಪಿಯನ್ನು ತೊರೆದು ಕಾಂಗ್ರೆಸ್​ ಸೇರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ದೇಶದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಜನರು ಕಾಂಗ್ರೆಸ್​ ಪಕ್ಷ ಬೆಂಬಲಿಸಬೇಕಾದ ಅನಿವಾರ್ಯತೆ ಇದೆ ಎಂದರು. ಈ ಸಂದರ್ಭದಲ್ಲಿ ಹೌಸಿಂಗ್​ ಬೋರ್ಡ್​ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ, ಮಾಜಿ ಶಾಸಕ ಶಿವಶಂಕರ್​ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net