

ಹೊನ್ನಾಳಿ: ಒಂದು ತಿಂಗಳಿನಿಂದ ಹೃದಯಾಘಾತ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಮಂಗಳವಾರ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಶಿಸ್ತಿನ ಜೀವನಶೈಲಿ ಅನುಸರಿಸದಿರುವುದೇ ಅನಾರೋಗ್ಯಕ್ಕೆ ಕಾರಣ. ಜತೆಗೆ ಆಹಾರ ಸೇವನೆ, ಒತ್ತಡದ ಜೀವನದಿಂದಾಗಿ ಯುವಕರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ ಎಂದರು.
ನಿತ್ಯ ಕ್ರಿಯಾಶೀಲರಾಗಬೇಕಾದರೆ ಯೋಗ, ಮುದ್ರೆ ಹಾಗೂ ಪ್ರಾಣಾಯಾಮ ಮಾಡಿ. ಆಗ ಮನಸ್ಸು ಪ್ರಫುಲ್ಲವಾಗುತ್ತದೆ ಹಾಗೂ ದೇಹ ಕ್ರಿಯಾಶೀಲವಾಗಿರುತ್ತದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಮುಖ್ಯವಾಗಿ ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಹಿಂದೆ ಆರೋಗ್ಯವೇ ಭಾಗ್ಯ ಎನ್ನುತ್ತಿದ್ದರು, ಈಗ ಆರೋಗ್ಯವೇ ಮಹಾಭಾಗ್ಯ ಎನ್ನುವಂತಾಗಿದೆ. ದುಡಿಮೆ ಜತೆಗೆ ಆರೋಗ್ಯದ ಕಡೆ ಗಮನ ಇರಲಿ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, 1983ರ ರಾಮಕೃಷ್ಣ ಹೆಗ್ಗಡೆ ಸರ್ಕಾರದಲ್ಲಿ, ನಮ್ಮ ಸಹೋದರ ಡಿ.ಜಿ. ಬಸವನಗೌಡ್ರು ಆಸ್ಪತ್ರೆ ನಿರ್ವಿುಸಲು ಅನುದಾನ ತಂದಿದ್ದರು. ನಾನು ಕೂಡ ಶಾಸಕನಾದ ಸಮಯದಲ್ಲಿ ಆಸ್ಪತ್ರೆಗೆ 3.5 ಕೋಟಿ ಅನುದಾನ ತಂದು ಕತ್ತಿಗೆ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದೇನೆ ಎಂದರು.
ಹೊನ್ನಾಳಿ, ಕತ್ತಿಗೆ, ಮಾದೇನಹಳ್ಳಿ ಸೇರಿ ಕೆಲವು ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದು, ಶೀಘ್ರವೇ ರಸ್ತೆ ಕಾಮಗಾರಿಗೆ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇತ್ತೀಚೆಗೆ ಯುವಕರು ಮೊಬೈಲ್ ಬಿಟ್ಟು ಬದುಕುವುದೇ ಕಷ್ಟ ಎಂದು ತಿಳಿದುಕೊಂಡಿದ್ದಾರೆ. ಸತ್ವ ಇಲ್ಲದ ಆಹಾರ ಸೇವನೆಯಿಂದ ಯುವಕರಲ್ಲಿ ಕ್ರಿಯಾಶೀಲತೆ ಮರೆಯಾಗಿದೆ ಎಂದ ಅವರು ನನಗೀಗ 76 ವರ್ಷವಾದರೂ ಗಟ್ಟಿಯಾಗಿದ್ದೇನೆ, ನಿತ್ಯ ವಾಕ್ ಮಾಡುತ್ತೇನೆ ಹಾಗೂ ಹೆಚ್ಚು ಲವಲವಿಕೆಯಿಂದ ಇರುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷೆ ಮೀನಮ್ಮ, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಡಿಎಚ್ಒ ಷಣ್ಮುಖಪ್ಪ, ಗ್ಯಾರಂಟಿ ಅನುಷ್ಠಾನ ತಾಲೂಕಾಧ್ಯಕ್ಷ ಗದ್ದಿಗೇಶ್, ಮುಖಂಡರಾದ ಕೆಂಗಲಹಳ್ಳಿ ಷಣ್ಮುಖಪ್ಪ, ಹನುಮನಹಳ್ಳಿ ಬಸವರಾಜಪ್ಪ, ಆರ್. ನಾಗಪ್ಪ, ಗುತ್ತಿಗೆದಾರ ಸಂತೋಷ್ ಇತರರು ಇದ್ದರು.