

ಜಗಳೂರು: ವಸತಿ ಯೋಜನೆಯಡಿ ಮನೆ ನಿರ್ವಿುಸಿಕೊಳ್ಳುವ ಫಲಾನುಭವಿಗಳಿಗೆ ನೀಡುವ 1.80 ಲಕ್ಷ ರೂ. ಸಾಕಾಗುವುದಿಲ್ಲ. ಹಾಗಾಗಿ ಇದರೊಟ್ಟಿಗೆ ಜಾತಿವಾರು ಸಾಲಗಳ ಮೂಲಕ ಹೆಚ್ಚಿನ ಹಣ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಸಂಸದರ ಅನುದಾನದಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು ಜಗಳೂರು ಕ್ಷೇತ್ರಕ್ಕೆ 67 ಲಕ್ಷ ರೂ. ನೀಡಲಾಗಿದೆ. ಕಲ್ಲೇದೇವರಪುರದ ಅಂಗನವಾಡಿ ಕೊಠಡಿಗೆ 10 ಲಕ್ಷ ರೂ, ಗೋಗುದ್ದು ರಂಗ ಮಂದಿರ ನಿರ್ಮಾಣ 5 ಲಕ್ಷ ರೂ, ಬಿಳಿಚೋಡು ಉರ್ದು ಶಾಲೆ ಕೊಠಡಿ ನಿರ್ವಣಕ್ಕೆ 15 ಲಕ್ಷ ರೂ, ಜಗಳೂರು ಹೈಟೆಕ್ ಬಸ್ ನಿಲ್ದಾಣಕ್ಕೆ 12 ಲಕ್ಷ ರೂ, ಅಣಬೂರು ರಂಗಮಂದಿರ ನಿರ್ಮಾಣ 5 ಲಕ್ಷ, ಸೊಕ್ಕೆ ಸಮುದಾಯ ಭವನ 10 ಲಕ್ಷ ರೂ. ನೀಡಿದ್ದು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ಕಡೆ ಸುಂದರವಾದ ಕಟ್ಟಡ, ಕೊಠಡಿ, ನಾಮಫಲಕವಿರುತ್ತದೆ. ಆದರೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಸರಿಯಾದ ಹಾಜರಾತಿ ಇರುವುದಿಲ್ಲ. ಸಾರ್ವಜನಿಕರಿಗೆ ಸ್ಪಂದಿಸುವುದಿಲ್ಲ ಎಂದು ಬೇಸರಿಸಿದರು.
ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರನ್ನು ಅಲೆದಾಡಿಸುವುದು ಸರಿಯಲ್ಲ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದರು.ಸಾರ್ವಜನಿಕರು ಸರ್ಕಾರಿ ಕಚೇರಿಗಳ ಸಂಕೀರ್ಣದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಯ ನಡುವೆಯೂ 600 ಕೋಟಿ ರೂ.ಗಿಂತ ಹೆಚ್ಚು ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತರಲಾಗುವುದು ಎಂದರು.
ರಾಜನಾಗುವವರೆಗೂ ರಾಜಕೀಯ ಮಾಡು, ರಾಜನಾದ ಮೇಲೆ ರಾಜ್ಯನೀತಿ, ರಾಜ ಧರ್ಮವನ್ನು ಪಾಲನೆ ಮಾಡು ಎನ್ನುವ ಮಾತಿನಂತೆ ಶ್ರೀರಾಮನ ಮಾರ್ಗ ಪರಿಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಇರದ ಅಪರೂಪದ ಪ್ರಾಣಿ ಕೊಂಡುಕುರಿ ಜಗಳೂರು ತಾಲೂಕಿನಲ್ಲಿರುವುದು ನಮ್ಮ ಜನರ ಸೌಭಾಗ್ಯವಾಗಿದೆ. ಅದನ್ನು ರಕ್ಷಣೆ ಮಾಡಿ ಉಳಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಪ ಪಂ ಅಧ್ಯಕ್ಷ ನವೀನ ಕುಮಾರ್, ಕೆಪಿಸಿಸಿ ಎಸ್ಟಿ ವಿಭಾಗದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಸೇರಿ ಮತ್ತಿತರರಿದ್ದರು.