ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬಕ್ಕೆ ಖಂಡನೆ

JLR ph 2 July 8 Manavi (1)
Published on

ಜಗಳೂರು: ಪಟ್ಟಣದ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ-65 ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬವನ್ನು ಖಂಡಿಸಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ದಾವಣಗೆರೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಸ್ತೆ ಸಂಚಾರದಲ್ಲಿ ನಿತ್ಯ ಕಿರಿಕಿರಿ ಅನುಭವಿಸಲಾಗುತ್ತಿದೆ. ಅಲ್ಲದೇ ಅಪಘಾತದಲ್ಲಿ ಅನೇಕರು ಸಾವಿಗೀಡಾಗಿದ್ದಾರೆ. ಆದರೆ ನಾಲ್ಕೈದು ತಿಂಗಳಿಂದ ಕಾಮಗಾರಿ ನೆನಗುದಿಗೆ ಬಿದ್ದಿರುವುದು ಅನುಮಾನಕ್ಕೆ ದಾರಿಯಾಗಿದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ವಕೀಲ ಸಣ್ಣಓಬಯ್ಯ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಲೋಕೋಪಯೋಗಿ ಇಲಾಖೆ ಮತ್ತು ಪಪಂ ಜಂಟಿಯಾಗಿ ಸರ್ವೆ ಕಾರ್ಯ ಮುಗಿಸಿ 69 ಅಡಿ ತೆರವುಗೊಳಿಸಲು ಕಟ್ಟಡಗಳಿಗೆ ಮಾರ್ಕಿಂಗ್ ಮಾಡಿದ್ದರು. ಆದರೆ ವರ್ತಕರ ಮನವಿ ಮೇರೆ 50 ಅಡಿಗೆ ತೆರವು ಮಾಡಲು ನಿಗದಿಗೊಳಿಸಿ ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಳ್ಳುವಂತೆ ಸೂಚಿಸಿದ್ದರು ಎಂದರು.

ಪಪಂಗೆ ಸಂಬಂಧಿಸಿದ 26 ಮಳಿಗೆಗಳ ವಿಚಾರದಲ್ಲಿ ಗದ್ದಲ ಉಂಟಾಗಿ ಎಲ್ಲ ತೆರವು ಕಾಮಗಾರಿ ನಿಲ್ಲಿಸಲಾಗಿದೆ. ಹಾಗಾಗಿ ತಾವು ಮಧ್ಯ ಪ್ರವೇಶಿಸಿ ಶೀಘ್ರವೇ ತೆರವು ಕಾರ್ಯಕ್ಕೆ ಸೂಚನೆ ನೀಡಬೇಕು ಎಂದು ಸಂಸದರಿಗೆ ಮನವಿ ಮಾಡಿದರು.

ವಕೀಲ ಆರ್. ಓಬಳೇಶ್ ಮಾತನಾಡಿ, ನಾಲ್ಕು ದಿನಗಳ ಕಾಲ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 69 ಅಡಿ ವಿಸ್ತರಣೆಗೆ ಕಾನೂನು ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆ, ಪಪಂ,ರಾಜ್ಯ ರಸ್ತೆ ಹೆದ್ದಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿ ಕೆಲವರು ಮಾಧ್ಯಮಗಳ ಮುಂದೆ 40 -50 ಅಡಿ ತೆರವುಗೊಳಿಸಬೇಕೆಂದು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಕರುನಾಡು ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಂ. ಹೊಳೆ ಮಹಲಿಂಗಪ್ಪ ಮಾತನಾಡಿ, ಈ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸದೇ ಹೋದರೆ ಜಗಳೂರು ಬಂದ್ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹತ್ತಾರು ಸಂಘಟನೆಗಳ ಹೋರಾಟಗಾರರು ಭಾಗವಹಿಸಿದ್ದರು. ವಕೀಲರ ಸಂಘದ ತಾಲೂಕಾಧ್ಯಕ್ಷ ಟಿ. ಬಸವರಾಜ್, ಪಪಂ ಸದಸ್ಯ ಲುಕ್ಮಾನ್ ಖಾನ್, ಎಸ್​ಎಫ್​ಐ ಜಿಲ್ಲಾ ಮುಖಂಡ ಅನಂತ್ ರಾಜ್, ಮುಖಂಡರಾದ ಬಿ. ಲೋಕೇಶ್, ರೇವಣ್ಣ, ಶೇಖರಪ್ಪ, ಬುಳ್ಳಳ್ಳಿ ರಾಜಪ್ಪ, ರೈತ ಸಂಘದ ಲೋಕೇಶ್ ಕುಮಾರ್, ಹನುಮಂತಾಪುರ ಶಿವಕುಮಾರ್, ಇಂದಿರಮ್ಮ, ಚೌಡಮ್ಮ, ಸುಧಾ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net