

ಚನ್ನಗಿರಿ: ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ತರಬೇತಿ ಪಡೆಯಲು ಸೂಕ್ತ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಕೆಪಿಎಸ್ ಶಾಲೆಯಲ್ಲಿ ಗುರುವಾರ 15 ಲಕ್ಷ ರೂ. ವೆಚ್ಚದ ಶಾಲಾ ಹೆಚ್ಚುವರಿ ಕೊಠಡಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿಭೆ ಇರುವ ನೂರಾರು ವಿದ್ಯಾರ್ಥಿಗಳು ಆರ್ಥಿಕ ಮತ್ತು ನೈತಿಕ ಬೆಂಬಲ ಸಿಗದೆ ಮನೆಯಲ್ಲೇ ಇರುವಂತಾಗಿದೆ. ಅಲ್ಲದೇ ಗ್ರಾಮೀಣ ಭಾಗದ ಮಕ್ಕಳು ಪದವಿ ಪಡೆದು ವಿದ್ಯಾಭ್ಯಾಸ ಮುಂದುವರಿಸಲಾಗದೆ ಕುಟುಂಬಕ್ಕೆ ನೆರವಾಗಲು ಕೆಲಸಕ್ಕೆ ಹೋಗುವ ಪರಿಸ್ಥಿತಿಯಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ 6 ರಿಂದ 8 ತಿಂಗಳು ಉಚಿತ ತರಬೇತಿ ನೀಡುವ ಉದ್ದೇಶ ನನ್ನದಾಗಿದೆ ಎಂದರು.
ಈಗಾಗಲೇ ಪ್ರತ್ಯುನ್ನತ ಎಂಬ ಯೋಜನೆಯಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಪರೀಕ್ಷೆಗಳಿಗೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಈ ವರ್ಷದಲ್ಲಿ ಆಫ್ಲೈನ್ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ. ಇಂತಹ ಕೋರ್ಸ್ಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಯಶಸ್ಸು ಪಡೆಯಬೇಕು ಎಂದು ತಿಳಿಸಿದರು.
ದಿಶಾ ಸಮಿತಿ ಸದಸ್ಯ ಮೂರ್ತಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿರುವ ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದ ಮನೆಯಲ್ಲೇ ಇದ್ದಾರೆ. ಅಂಥವರನ್ನು ಗುರುತಿಸಿ ಉಚಿತ ತರಬೇತಿ ನೀಡಿದರೆ ಉನ್ನತ ಹುದ್ದೆಗಳಲ್ಲಿ ದಾವಣಗೆರೆ ಮಕ್ಕಳು ಇರುತ್ತಾರೆ. ಅಭಿವೃದ್ಧಿ ಕೆಲಸದ ಜತೆಗೆ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವವರು ವಿರಳ. ಅಂತಹ ಕೆಲಸವನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾಡುತ್ತಿದ್ದಾರೆ ಎಂದರು.
ಬಿಇಒ ಎಲ್. ಜಯಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಕೆಪಿಸಿಸಿ ಸದಸ್ಯ ಹೊದಿಗೆರೆ ರಮೇಶ್, ದಿಶಾ ಸಮಿತಿ ಸದಸ್ಯೆ ಪಾಂಡೋಮಟ್ಟಿ ಚಂದ್ರಮ್ಮ, ಪ್ರಾಚಾರ್ಯ ಶಾರದಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಬಿ. ಕಿರಣ್, ಶಿವರಾಜ್, ಅಸೀಫ್, ಎಚ್.ಎನ್. ರವಿ, ಪಾಪಯ್ಯ, ಎಂ.ಬಿ. ನಾಗರಾಜ್, ನಾಗರಾಜಪ್ಪ, ಜಬ್ಬರ್ಸಾಬ್, ಅಣ್ಣಪ್ಪ, ಶೇರ್ಅಲಿ ಇದ್ದರು.