

ಮೈಸೂರು: ರಾಜ್ಯದ ಉಪಮುಖ್ಯಮಂತ್ರಿಯ ಸಹೋದರ ಎಂಬ ಅಹಂಕಾರದಿಂದ ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕೊಟ್ಟಿದ್ದಾರೆ. ಅವರು ಈ ಹೇಳಿಕೆ ಕೊಟ್ಟ ಕೂಡಲೇ ಅವರನ್ನು ಬಂಧಿಸಬೇಕಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ತಿರಸ್ಕಾರ ಮಾಡಿದರು. ಆದರೆ ಡಿಸಿಎಂ ಎನ್ನುವ ಅಹಂಕಾರದಲ್ಲಿ ಡಿ.ಕೆ.ಶಿವಕುಮಾರ್ ನನಗೆ ಸೆಟಲ್‌ಮೆಂಟ್ ಮಾಡುತ್ತಾರಂತೆ. ಅರ್ಧ ಸೆಟಲ್‌ಮೆಂಟ್ ಮಾಡಿದ್ದೇವೆ. ಇನ್ನೂ ಅರ್ಧ ಇದೆ ಎಂದಿದ್ದಾರೆ. ಈತ ಒಬ್ಬ ಗೂಂಡಾ ಉಪಮುಖ್ಯಮಂತ್ರಿ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಇಂತಹ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ಅವರ ಅರ್ಧ ಸೆಟಲ್‌ಮೆಂಟ್ ಜಾರಿ ನಿರ್ದೇಶನಾಲಯ (ಇಡಿ) ಮಾಡಿದೆ. ಅವರು ತಿಹಾರ್ ಜೈಲಿನಲ್ಲಿ ಸೆಟಲ್‌ಮೆಂಟ್ ತೆಗೆದುಕೊಂಡಿದ್ದಾರೆ. ಮತ್ತೆ ಜೈಲಿಗೆ ಹೋಗುವ ಮೂಲಕ ಉಳಿದ ಸೆಟಲ್‌ಮೆಂಟ್ ತೆಗೆದುಕೊಳ್ತಾರೆ. ಶೀಘ್ರವೇ ಅವರಿಗೆ ಪೂರ್ಣ ಸೆಟಲ್‌ಮೆಂಟ್ ಸಿಗುತ್ತೆ ಎಂದು ಗುಡುಗಿದರು.
ಲೋಕಸಭಾ ಚುನಾವಣೆಯಲ್ಲಿ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ಚರ್ಚೆ ಆಗಲಿದ್ದು, ಈ ಬಾರಿ ನಾವು 28 ಕ್ಷೇತ್ರವನ್ನ ಗೆದ್ದೇ ಗೆಲ್ಲುತ್ತೇವೆ. ನನ್ನ ಮಗ ಹೋರಾಟ ಮಾಡುತ್ತಿದ್ದಾನೆ. ಆತನಿಗೆ ಟಿಕೆಟ್ ಸಿಕ್ಕಿದರೆ ಸಂತೋಷ. ಟಿಕೆಟ್ ಸಿಕ್ಕರೆ ಎಲ್ಲರೂ ಸೇರಿ ಯಾರೂ ಅಭ್ಯರ್ಥಿಯಾಗುತ್ತಾರೆ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಒಟ್ಟಾರೆ ನನ್ನ ಮಗನಿಗೆ ಟಿಕೆಟ್ ಕೊಡುವ ವಿಶ್ವಾಸವಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಜ್ಞಾನವ್ಯಾಪಿ ಮಸೀದಿಗಾಗಿ ಬಲಿದಾನಕ್ಕೂ ಸಿದ್ಧ ಎಂಬ ಎಸ್‌ಡಿಪಿಐ ಅಬ್ದುಲ್ ಮಸೀಜ್ ಹೇಳಿಕೆ ನೀಡಿದ್ದರೂ ಸರ್ಕಾರ ಸುಮ್ಮನಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಬದುಕಿದೆಯೇ ಎನ್ನುವ ಅನುಮಾನ ಬರುತ್ತಿದೆ. ರಾಜ್ಯದಲ್ಲಿ ಸರ್ಕಾರ ಬದುಕಿದ್ದರೆ ನ್ಯಾಯಾಲಯದ ವಿರುದ್ಧ ಹೇಳಿಕೆ ನೀಡಿರುವ ಎಸ್‌ಡಿಪಿಐ ಮುಖಂಡ ಅಬ್ದುಲ್ ಮಜೀದ್ ನನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಮುಸಲ್ಮಾನರ ಪರ ಎನ್ನುವುದು ತೋರಿಸಿಕೊಟ್ಟಿದೆ ಎಂದರು.