

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ನಾಲ್ಕೂ ತಾಲೂಕುಗಳು ತೀವ್ರ ಬರಪೀಡಿತ ಪಟ್ಟಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬರ ನಿರ್ವಹಣೆ ಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಸೂಚಿಸಿದರು. ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಳೆ ಪ್ರಮಾಣ ಅತೀ ಕಡಿಮೆಯಾಗಿದ್ದು, ನಾಲ್ಕು ತಾಲೂಕುಗಳನ್ನು ತೀವ್ರ ಬರ ತಾಲೂಕು ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅಗತ್ಯವಿರುವ ವರದಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ತಂಡ ಜಿಲ್ಲೆಗೆ ಭೇಟಿ ನೀಡಿದಾಗ ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಇಲಾಖೆ ಅಧಿಕಾರಿಗಳು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಕಾಮಗಾರಿ ವಿಳಂಬ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹೊಸಕೋಟೆ ತಾಲೂಕಿನ ಕನ್ನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಕಾಮಗಾರಿ ವೆಚ್ಚ ಹೆಚ್ಚಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸುವಂತೆ ಸಂಸದರು ಸೂಚಿಸಿದರು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ನಿರ್ದೇಶಿಸಿದ ಸಂಸದರು, ಗ್ರಾಮೀಣ ಪ್ರದೇಶದಲ್ಲಿ ವಸತಿರಹಿತರಿಗೆ ನಿವೇಶನ ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಅಕ್ಷರ ದಾಸೋಹ ಯಶಸ್ವಿ; ಅಕ್ಷರ ದಾಸೋಹ ಯೋಜನೆಯಡಿ 72,402 ಶಾಲಾ ಮಕ್ಕಳಿಗೆ ಹಾಲು, ಬಾಳೆಹಣ್ಣು, ಮೊಟ್ಟೆ ಬಿಸಿಯೂಟ ನೀಡಲಾಗುತ್ತಿದ್ದು, ಇದರಿಂದಾಗಿ ಶಾಲಾ ಮಕ್ಕಳ ಹಾಜರಾತಿ ಹೆಚ್ಚಳಗೊಂಡಿದೆ ಎಂದು ಶಿಕ್ಷಣ ಹಾಗೂ ಅಕ್ಷರ ದಾಸೋಹ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಅಧಿಕಾರಿಗಳ ಪಥಸಂಚಲನ
ಸಭೆಯಲ್ಲಿ ಪ್ರತಿ ಇಲಾಖೆ ಅಧಿಕಾರಿಗಳನ್ನು ವೇದಿಕೆ ಮುಂದೆ ಕರೆದು ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಂಸದರು, ಸಭೆ ಆರಂಭದಿಂದ ಕೊನೆವರೆಗೆ ಅಧಿಕಾರಿಗಳಿಂದ ಪಥಸಂಚಲನ ನಡೆಸಿದರು.