ಶೇ. 40ರಷ್ಟು ಕಮಿಷನ್ ಹಣದಿಂದ ಸರ್ಕಾರ ಉರುಳಿಸುವ ಮಾತು

digvijay singh
Published on

ಹುಬ್ಬಳ್ಳಿ: ತಮ್ಮ ಬಳಿ ಜಮಾ ಇರುವ ಶೇ. 40ರಷ್ಟು ಕಮಿಷನ್ ಹಣವನ್ನು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿಯವರು ಬಳಸಬೇಕು ಎಂದುಕೊಂಡಿದ್ದಾರೆ. ಕಮಿಷನ್ ಹಣದ ಬಲದಿಂದಲೇ ಅವರು ರಾಜ್ಯ ಸರ್ಕಾರ 6 ತಿಂಗಳಲ್ಲಿ ಉರುಳಲಿದೆ ಎಂಬ ಮಾತನಾಡುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಸುಭದ್ರವಾಗಿದ್ದು, ಪತನ ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಹೇಳಿದರು.

ಸೋಮವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ. ಅದು, ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದ ಸರ್ಕಾರವನ್ನು ಉರುಳಿಸುತ್ತ ಬಂದಿದೆ. ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸರ್ವಧರ್ಮ ಸಮನ್ವಯ, ಸರ್ವ ಜನರ ವಿಕಾಸ ಹಾಗೂ ಕಾಂಗ್ರೆಸ್ ವಿಚಾರಧಾರೆಯನ್ನು ಮೆಚ್ಚಿ ಕರ್ನಾಟಕದ ಜನತೆ ಕಾಂಗ್ರೆಸ್​ಗೆ ಅಧಿಕಾರ ನೀಡಿದ್ದಾರೆ ಎಂದರು.

ಭಾರತವನ್ನು ಹಿಂದು ರಾಷ್ಟ್ರವೆಂದು ಘೊಷಣೆ ಮಾಡುವುದು ಸಂವಿಧಾನ ವಿರೋಧಿಯಾಗುತ್ತದೆ. ನೇಪಾಳದಲ್ಲಿ ಶೇ. 95ರಷ್ಟು ಜನ ಹಿಂದುಗಳಿದ್ದರೂ ಅಲ್ಲಿ ಹಿಂದು ರಾಷ್ಟ್ರವೆಂದು ಘೊಷಣೆ ಮಾಡಿಲ್ಲ. ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವೆಂದು ಘೊಷಿಸಿಕೊಂಡ ಮೇಲೆ ಅಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಅಲ್ಲಿ ಮುಸಲ್ಮಾನರೇ ಮುಸಲ್ಮಾನರನ್ನು ಹೊಡೆದು ಹಾಕುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್ ಎಲ್ಲ ಧರ್ಮೀಯರು ಭಾಗವಹಿಸಿದ್ದರು. ಭಾರತ ಎಲ್ಲ ಧರ್ವಿುಯರ ರಾಷ್ಟ್ರ ಎಂದು ಹೇಳಿದರು.

ದೇಶಕ್ಕೆ ಹಿಂದುತ್ವದ ಪರಿಕಲ್ಪನೆ ಕೊಟ್ಟಿದ್ದು ಸಾವರ್ಕರ್. ಹಿಂದುತ್ವಕ್ಕೂ ಸನಾತನ ಧರ್ಮಕ್ಕೂ ಸಂಬಂಧವಿಲ್ಲ ಎಂದು ಅವರು ಅವರೇ ಹೇಳಿದ್ದರು. ಹಿಂದುತ್ವದಲ್ಲಿ ಸಾಫ್ಟ್ ಮತ್ತು ಹಾರ್ಡ್ ಎಂಬುದು ಇಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುವವರು ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಭಿಪ್ರಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net