ರೈತರು ಕಷ್ಟಪಟ್ಟು ದುಡಿದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹಲವು ದಶಕಗಳಿಂದ ಈ ಕೋವಿ ಪರವಾನಗಿ ಸೌಲಭ್ಯವನ್ನು ಅವಲಂಬಿಸಿದ್ದು, ಕಳೆದೊಂದು ವರ್ಷದಲ್ಲಿ ಕೃಷಿ ಭೂಮಿಗೆ ವನ್ಯಜೀವಿಗಳು ಹಾನಿ ಮಾಡಿಲ್ಲಎಂಬ ಕಾರಣ ನೀಡಿ ನೊಂದ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿರುವ ಬಗ್ಗೆ ಸಂತ್ರಸ್ತರು ಗಮನಕ್ಕೆ ತಂದಿದ್ದಾರೆ. ಆದರೆ, ರೈತರ ಬಳಿ ಪರವಾನಗಿ ಹೊಂದಿದ ಬಂದೂಕು ಇರುವುದೇ ವನ್ಯಜೀವಿಗಳು ಕೃಷಿ ಭೂಮಿಗೆ ನುಗ್ಗದಂತೆ ತಡೆಯುವ ಪ್ರಮುಖ ಪ್ರತಿಬಂಧಕ ಶಕ್ತಿಯಾಗಿದೆ. ಕಾಡುಪ್ರಾಣಿಗಳ ದಾಳಿಯು ತೀರಾ ಅನಿರೀಕ್ಷಿತವಾಗಿದ್ದು, ಅದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಬಂದೂಕು ಪರವಾನಗಿ ಇಲ್ಲದೆ ರೈತನು ಅಸಹಾಯಕನಾಗಿ ಕೈಕಟ್ಟಿ ಕುಳಿತರೆ, ಕಣ್ಣೆದುರೇ ಇಡೀ ಕೃಷಿ ನಾಶವಾಗಿ ಆತನ ಜೀವನೋಪಾಯವೇ ಬೀದಿಗೆ ಬೀಳುವ ಆತಂಕ ಎದುರಾಗುತ್ತದೆ ಎಂಬುವುದನ್ನು ಪತ್ರದಲ್ಲಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ್ದಾರೆ.