ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುವ ಹುನ್ನಾರ : ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ

IMG-20240408-WA0344
Published on




ಮಂಗಳೂರು : ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಹಿಂದು ಸಂಘಟನೆಗಳ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಕರಾವಳಿ ಭಾಗದ ಹಿಂದೂ ನಾಯಕರು ಮತ್ತು ಸಂಘಟನೆಗಳನ್ನು ಬೆದರಿಸಲು ಆಡಳಿತ ಯಂತ್ರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ ಕೇಸ್ ದಾಖಲಿಸುವುದು ಖಂಡನೀಯ. ರಾಜ್ಯದಲ್ಲಿ ಕಾನೂನುವ್ಯವಸ್ಥೆಯನ್ನು ಕಾಪಾಡಲು
ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ತನ್ನ ಹುಳುಕನ್ನು ಮರೆಮಾಚಲು ಹತಾಶೆಯಿಂದ ಹಿಂದೂಗಳ ಧ್ವನಿ ಹತ್ತಿಕ್ಕುತ್ತಿದೆ. ಹಿಂದೂ ನಾಯಕ ಅರುಣ್ ಪುತ್ತಿಲ ಅವರನ್ನು ಕಲಬುರಗಿಗೆ ಗಡಿಪಾರು ಮಾಡಲು ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಈ ಸಂವಿಧಾನ ವಿರೋಧಿ, ಹಿಂದೂ ವಿರೋಧಿ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಹೆಜ್ಜೆ ಹೆಜ್ಜೆಗೂ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎನ್ನುವುದಕ್ಕೆ ದ.ಕ ಜಿಲ್ಲೆಯಲ್ಲಿ
ನಡೆಯುತ್ತಿರುವ ಅನಿರೀಕ್ಷಿತ ಬೆಳವಣಿಗೆಗಳೇ ಸಾಕ್ಷಿ. ಪೊಲೀಸರು ರಾತ್ರೋರಾತ್ರಿ ಕಡಬ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಹಿಂದೂ
ಮುಖಂಡರು, ಯುವಕರ ಮನೆಗಳಿಗೆ ತೆರಳಿ ಮಾನಸಿಕ ಕಿರುಕುಳ ಹಾಗೂ ಬೆದರಿಸುತ್ತಿರುವುದು ಅತ್ಯಂತ ಕಾನೂನು ಬಾಹಿರ
ಕ್ರಮವಾಗಿದೆ. ಸರ್ಕಾರದ ಈ ಹಿಂದೂ ವಿರೋಧಿ ನೀತಿ ವಿರುದ್ದ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದರು ಎಚ್ಚರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಮಾಜದ ನಾಯಕರಿಗೆ ನೀಡುತ್ತಿರುವ ಕಿರುಕುಳ ಬಗ್ಗೆ ಕಳವಳ ವ್ಯಕ್ತಪಡಿಸಿ ಈಗಾಗಲೇ ನಾನು
ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಪೊಲೀಸರ ಈ ರೀತಿಯ ವರ್ತನೆಯನ್ನು ಕೂಡಲೇ
ನಿಲ್ಲಿಸುವಂತೆ ಅವರಲ್ಲಿ ಕೋರಿದ್ದೇನೆ. ಜಿಲ್ಲೆಯ ಬಿಜೆಪಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net