

ಮಂಗಳೂರು : ಭ್ರಷ್ಟ ಆಡಳಿತ ನೀಡಿ, ಉಚಿತ ಗ್ಯಾರಂಟಿ ಮುಖವಾಡ ಧರಿಸಿ ಬೆಲೆ ಏರಿಕೆಯ ಬರೆ ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಗಾಲು ಹಾಕಿ ಅಭಿವೃದ್ಧಿ ಕುಂಠಿತಗೊಳಿಸಿರುವುದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಲೇವಡಿ ಮಾಡಿದ್ದಾರೆ.
ಮುಡಾ ನಿವೇಶನದಲ್ಲಿ ಗೋಲ್‌ಮಾಲ್ ಮಾಡಿ ತಮ್ಮ ವಿರುದ್ಧದ ಪ್ರಕರಣವನ್ನೇ ಮುಚ್ಚಿ ಾಕಿರುವುದೇ ವೈಯಕ್ತಿಯವಾಗಿ ಸಿಎಂ ಸಿದ್ದರಾಮಯ್ಯ ಅವರ ಬಹು ದೊಡ್ಡ ಸಾಧನೆ. ಕೆಪಿಎಸ್‌ಸಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಗುತ್ತಿಗೆದಾರರ ಶೇ.60 ಕಮಿಷನ್ ಆರೋಪ, ನೂರಾರು ರೈತರ ಆತ್ಮಹತ್ಯೆ, ವಕ್ಫ್ ಬೋರ್ಡ್ ಮೂಲಕ ಹಿಂದೂ ರೈತರ ಜಮೀನು ಕಬಳಿಕೆ ರಾಜ್ಯ ಸರ್ಕಾರದ ಪ್ರಮುಖ ಸಾಧನೆಗಳು ಎನ್ನುವುದರಲ್ಲಿ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಡ್ರಗ್ಸ್ ಮಾಫಿಯಾ, ಕೊಲೆ, ಅತ್ಯಾಚಾರ ಜಾಸ್ತಿಯಾಗಿ ಗೃಹ ಇಲಾಖೆಯೇ ಸತ್ತು ಹೋಗಿದೆ. ವಿಧಾನ ಸೌಧದೊಳಗೆಯೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿ ದೇಶದ್ರೋಹ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿರುವ ಈ ಸರ್ಕಾರ ಜನರ ಮುಂದೆಯೇ ಬೆತ್ತಲಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದಿರುವ ಇಸ್ಲಾಮಿಕ್
ಮೂಲಭೂತವಾದಿಗಳನ್ನು ಮಟ್ಟ ಹಾಕುವುದಕ್ಕೆ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಪಿಎಫ್‌ಐನಂಥ ಸಮಾಜಘಾತುಕ
ಶಕ್ತಿಗಳು ಬಾಲ ಬಿಚ್ಚುವುದಕ್ಕೆ ಆಸ್ಪದ ಮಾಡಿಕೊಟ್ಟಿದೆ. ಇಂತಹ ಸರ್ಕಾರಕ್ಕೆ 2 ವರ್ಷದ ಸಾಧನೆ ಮಾಡಿಸಿಕೊಳ್ಳುವುದಕ್ಕೆ ಯಾವ ಅರ್ಹತೆ ಇದೆ ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ 2 ವರ್ಷದ ಸಾಧನಾ ಸಮಾವೇಶ ದುರಾಡಳಿತ, ದಿವಾಳಿತನ, ಭ್ರಷ್ಟಾಚಾರ, ದರ ಏರಿಕೆ, ಹಗರಣ, ಅಭಿವೃದ್ಧಿ ಶೂನ್ಯ ಆಡಳಿತದ ಕರಾಳತೆಯನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.