ಜಿಹಾದಿ ಮನಃಸ್ಥಿತಿಯನ್ನು ಬೆಂಬಲಿಸುವ ಕಾಂಗ್ರೆಸ್ ಸರ್ಕಾರ : ಸಂಸದ ಕ್ಯಾ.ಬ್ರಿಜೇಶ್ ಚೌಟ

IMG-20240408-WA0344
Published on



ಮಂಗಳೂರು : ಕಾಂಗ್ರೆಸ್ ಆಡಳಿತದಿಂದ ರಾಜಧಾನಿ ಬೆಂಗಳೂರು ಕ್ರೈಂ ಕ್ಯಾಪಿಟಲ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಹಾದಿ ಮನಃಸ್ಥಿತಿಯನ್ನು ಬೆಂಬಲಿಸುವ ಸರ್ಕಾರ ರಾಜ್ಯದಲ್ಲಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ ಮರ್ಯಾದೆ ಇಲ್ಲದ, ನಾಡಿನ ಸಾಂಸ್ಕೃತಿಕ ಪರಂಪರೆ ಗೊತ್ತಿಲ್ಲದ, ಹಣ ಲೂಟಿ ಮಾಡುವ, ಡ್ರಗ್ಸ್ ಧಂದೆ ಪೋಷಿಸುವ ದಗಲ್ಬಾಜಿ ಸರ್ಕಾರ ಆಡಳಿತ ನಡೆಸುತ್ತಿದೆ . ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವ ನಿರಂತರ ಪ್ರಯತ್ನ ಸಿದ್ದರಾಮಯ್ಯ ಸರ್ಕಾರದಿಂದ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಮಿತಿ ಮೀರುತ್ತಿದೆ. ಮಹಿಳೆಯರು, ದನಗಳು, ಉದ್ಯಮಿಗಳು, ಗುತ್ತಿಗೆದಾರರಿಗೆ ಸುರಕ್ಷೆ ಇಲ್ಲದಂತಾಗಿದೆ. ಸೈಬರ್ ಪ್ರಕರಣದಲ್ಲಿ ಒಂದು ವರ್ಷದಲ್ಲಿ ರಾಜ್ಯದ ಜನ 2600 ಕೋಟಿ ರೂ. ಕಳೆದುಕೊಂಡಿದ್ದರೂ ಸರ್ಕಾರ ಮೌನವಾಗಿದೆ. ಕಾಂಗ್ರೆಸಿನ ಸೋತ ಅಭ್ಯರ್ಥಿಗಳು ಪೊಲೀಸರ ವರ್ಗಾವಣೆ ಧಂದೆ ನಡೆಸುತ್ತಿದ್ದಾರೆ. ಸರ್ಕಾರ ಕ್ರಿಮಿನಲ್‌ಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಆಪಾದಿಸಿದರು. ದನಗಳ ಕೆಚ್ಚಲು ಕಡಿಯುವ ನೀಚರ ಬಗ್ಗೆ ಸರ್ಕಾರ ಮೃದು ನೀತಿ ತೋರಿದೆ.
ಪಿಎ್ಐ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಕೇಸು ವಾಪಸ್ ಪಡೆಯಲಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗ ಸಿಎಂ, ಡಿಸಿಎಂ, ಗಹ ಸಚಿವರು ಮೌನವಹಿಸಿ, ಪರೋಕ್ಷ ಬೆಂಬಲ ನೀಡಿದ್ದರು. ಜಿಲ್ಲೆಯ ಕಾಂಗ್ರೆಸ್ ನಾಯಕರೂ ಮೌನ ವಹಿಸಿದ್ದರು. ಈ ಎಲ್ಲ ವಿಚಾರಗಳನ್ನು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಿದ್ದೇನೆ ಎಂದು ಸಂಸದರು ಹೇಳಿದರು.
ವಾಮಂಜೂರು ಶೂಟೌಟ್ ಪ್ರಕರಣದಲ್ಲಿ ರಿವಾಲ್ವರ್ ಯಾರದ್ದು ಎಂಬ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸದೆ, ಮುಚ್ಚಿ ಹಾಕಿದ್ದಾರೆ. ಹಿಂದೂ ನಾಯಕರ ಹತ್ಯೆಗೆ ಯತ್ನಿಸಿದ ಪ್ರಕರಣ ಮುಚ್ಚಿ ಹಾಕಿದ ಶಂಕೆ ಇದೆ. ಕೋಟೆಕಾರು ದರೋಡೆ ಪ್ರಕರಣದಲ್ಲಿ
ಸ್ಥಳೀಯ ಕೆಲವರ ಪಾತ್ರದ ಬಗ್ಗೆ ಸಂಶಯವಿದೆ. ನಗರ ಪಾಲಿಕೆ ಮತ್ತು ಮುಡಾ ಕಚೇರಿಯಲ್ಲಿ ಕಾಂಗ್ರೆಸ್ ಚೇಲಾಗಳ ಕಾರುಬಾರು ಮಾತ್ರ ನಡೆಯುತ್ತಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದರು.
ಬಿಜೆಪಿಯಲ್ಲಿ ಯಾವುದೇ ಮನಸ್ತಾಪ ಇಲ್ಲ. ಚರ್ಚೆಗಳು ನಡೆಯುವುದು ಸಾಮಾನ್ಯ. ಸುಮ್ಮನೆ ಗಾಸಿಪ್‌ಗಳಿಗೆ ಆಸ್ಪದ ಕೊಡಬಾರದು. ನಮ್ಮದು ಸಂಘಟನಾತ್ಮಕ ಜಿಲ್ಲೆ ಎಂದು ಪತ್ರಕರ್ತರ ಪ್ರಶ್ನೆಯೊದಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ತಿಲಕ್‌ರಾಜ್, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net