ಸಿಎಂಗೆ ಕಾನೂನು ಸುವ್ಯವಸ್ಥೆಯ ಸತ್ಯ ದರ್ಶನ -ಸಂಸದ ಕ್ಯಾ. ಬ್ರಿಜೇಶ್ ಚೌಟ

IMG-20240408-WA0344
Published on


ಮಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಇರುವಾಗಲೇ ಹಾಡಹಗಲೇ ಕೋಟೆಕಾರಿನಲ್ಲಿ ದುಷ್ಕರ್ಮಿಗಳು ಬ್ಯಾಂಕ್ ದರೋಡೆ ನಡೆಸುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ ಎಂಬುದರ ಸತ್ಯ ದರ್ಶನದ ಅರಿವು ಕಾಂಗ್ರೆಸ್ ಸರ್ಕಾರಕ್ಕೆ ಆಗಿದೆ. ಇದೊಂದು ಅತ್ಯಂತ ಆತಂಕ ಹಾಗೂ ನಾಚಿಗೇಡಿನ ವಿಚಾರ ಎಂದು ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ಪ್ರವಾಸದಲ್ಲಿರುವ ವೇಳೆಯೇ ಇಷ್ಟೊಂದು ದೊಡ್ಡ ಮಟ್ಟದ ಅಪರಾಧ ಕೃತ್ಯ ನಡೆದಿರುವುದು ನಿಜಕ್ಕೂ ಶೋಚನೀಯ. ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಮಾಫಿಯಾ ಜಾಸ್ತಿಯಾಗುತ್ತಿದ್ದು, ಜನರು ಭಯದ ವಾತಾವರಣದಲ್ಲಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ. ರಾಜ್ಯದಲ್ಲಿ ದರೋಡೆಕೋರರು, ಸುಲಿಗೆಕೋರರು ಪೊಲೀಸರ ಭಯವಿಲ್ಲದೆ ಎಷ್ಟೊಂದು ರಾಜಾರೋಷವಾಗಿ ಅಪರಾಧ ಕೃತ್ಯ ಎಸಗಿ ಪರಾರಿಯಾಗುತ್ತಿದ್ದಾರೆ. ಹಸುಗಳ ಕೆಚ್ಚಲು ಕತ್ತರಿಸಿದ ಅತ್ಯಂತ ಹೇಯ ಕೃತ್ಯಕ್ಕೆ ಇಡೀ ರಾಜ್ಯ ಸಾಕ್ಷಿಯಾಗಿದೆ. ರಾಜ್ಯದ ಗೃಹ ಇಲಾಖೆ ಜನರ ಭದ್ರತೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಸಂಸದರು ಆರೋಪಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯದ ಮುಖ್ಯಮಂತ್ರಿ ಒಂದು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಎಲ್ಲೆಡೆ ಬಿಗಿಭದ್ರತೆ ಇರಬೇಕಾಗುತ್ತದೆ. ಅಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆಯದಂತೆ ಪೊಲೀಸರು ಅಲರ್ಟ್ ಇರಬೇಕು. ಆದರೆ, ಹೆಚ್ಚು ಜಾಗ್ರತೆ ವಹಿಸಬೇಕಾದ ಸಮಯದಲ್ಲೇ ದರೋಡೆಕೋರರು ಮಾರಕಾಸ್ತ್ರಗಳನ್ನು ಹಿಡಿದು ರಾಜಾರೋಷವಾಗಿ ಬಂದು ಬ್ಯಾಂಕ್ ದೋಚಿದ್ದಾರೆ.
ಅಪರಾಧಿಗಳು ಪೊಲೀಸರ ಭಯವಿಲ್ಲದೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕ್ಯಾ. ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net