ಜೂ.23 ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಸಂಸದ ಕ್ಯಾ. ಚೌಟ ಮಾಹಿತಿ

IMG-20240408-WA0344
Published on



ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ದ.ಕ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯಾಡಳಿತದ ಮುಂಭಾಗದಲ್ಲಿ ಜೂ.23 ರಂದು ಬೆಳಗ್ಗೆ 10ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ
ಕಾರ್ಯದರ್ಶಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಸಕರು ಅಧಿವೇಶನದಲ್ಲಿ ಚರ್ಚಿಸಿದರೂ, ಅನೇಕ ಬಾರಿ ಮನವಿ ಸಲ್ಲಿಸಿದರೂ
ಯಾವುದೇ ಸ್ಪಂದನೆ ಇಲ್ಲದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿ, 1 ಮಹಾ ನಗರ ಪಾಲಿಕೆ, 2 ನಗರ ಸಭೆ, 3 ಪುರಸಭೆ, 8 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಏಕ ನಿವೇಶನಕ್ಕೆ 9/11 ನಮೂನೆ ಅಗತ್ಯವಾಗಿದ್ದು, ಮನೆ ನಿರ್ಮಾಣದ ನಕ್ಷೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಯಮ ಸರಳೀಕರಣಕ್ಕೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಚಾರವೇ ಇದಕ್ಕೆ ಮೂಲ ಕಾರಣವಾಗಿದ್ದು ಹಣ ದೋಚಲು ಕೆಲವು ನಿಯಮಗಳನ್ನು ಅಳವಡಿಸಿದ್ದಾರೆ. ಅಕ್ರಮ-ಸಕ್ರಮ ಸಮಿತಿ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ
ರಚನೆಯಾಗಿದೆ. ಆದರೆ ಈ ಸಮಿತಿಯ ಗಮನಕ್ಕೆ ತಾರದೆ ನೇರವಾಗಿ ಸಹಾಯಕ ಆಯುಕ್ತರು ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದು ರೈತ ವಿರೋಧಿ ಕ್ರಮವಾಗಿದ್ದು ಸರ್ಕಾರ ಗ್ರಾಮೀಣ ಜನರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದರೂ ಇದುವರೆಗೆ ಒಂದೇ ಒಂದುಆಶ್ರಯ ಮನೆಗೆ ಅನುದಾನ ನೀಡಿಲ್ಲ. ಪ್ರತೀ ಗ್ರಾಮ ಪಂಚಾಯಿತಿಗೆ
100 ಆಶ್ರಯ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ವೃದ್ದಾೃಪ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗೆ ಆದಾಯ ತೆರಿಗೆ ಮಿತಿಯ ನೆಪ ಹೇಳಿ ತಡೆ ಒಡ್ಡಲಾಗಿದೆ. ಯೋಜನೆಯಿಮದ ಅನೇಕ ಜನರು ವಂಚಿತರಾಗುತ್ತಿದ್ದಾರೆ ಎಂದ ಅವರು ವಿದ್ಯುತ್ ಬಿಲ್ ಏರಿಕೆ, ಮಳೆಹಾನಿ ಪರಿಹಾರ ವಿಳಂಬ ನೀತಿಯಿಂದ ಜನತೆ
ತತ್ತರಿಸಿದ್ದಾರೆ ಎಂದು ಕ್ಯಾ.ಚೌಟ ಆರೋಪಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಪೂರ್ಣಿಮಾ.ಎಂ., ಖಜಾಂಚಿ ಸಂಜಯ್ ಪ್ರಭು,ವಕ್ತಾರ ರಾಜಗೋಪಾಲ್ ರೈ , ಪ್ರಭಾಕರ ಪ್ರಭು ಬಂಟ್ವಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net