

ಮಂಗಳೂರು : ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್‌ಇಝಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ನೀಡಿದ್ದ ಪಿಡಿಎಫ್ ಉದ್ಯೋಗಸ್ಥರನ್ನು ಜಿಎಂಪಿಎಲ್(ಗೈಲ್) ಕಂಪೆನಿಯಲ್ಲಿ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿ ಬಹುದಿನಗಳ ಗಂಭೀರ
ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕಾರಣರಾದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸತತ ಪ್ರಯತ್ನವನ್ನು ಕೇಂದ್ರ
ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಶ್ಲಾಘಿಸಿದ್ದಾರೆ.
ಜೆಬಿಎಫ್-ಜಿಎಂಪಿಎಲ್‌ಸಮಸ್ಯೆಯನ್ನು ಕೇಂದ್ರ ಸರ್ಕಾರ ಕೇವಲ 40 ದಿನಗಳಲ್ಲಿ ಬಗೆಹರಿಸಿದ ಹಿನ್ನೆಲೆಯಲ್ಲಿ ಕ್ಯಾ. ಚೌಟ ಅವರು ಮಂಗಳೂರಿನ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಪರವಾಗಿ ಬುಧವಾರ ನವ ದೆಹಲಿಯಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದ ಸುಮಾರು 115 ಪಿಡಿಎಫ್ ಕುಟುಂಬಸ್ಥರ ಬಹು ದಿನಗಳಿಂದ ಈಡೇರದೆ ಬಾಕಿಯಾಗಿದ್ದ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪೆಟ್ರೋಲಿಯಂ ಸಚಿವಾಲಯ ಹಾಗೂ ಜಿಎಂಪಿಎಲ್ ಕಂಪೆನಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಪ್ರೇರೇಪಿಸಿಸಮಸ್ಯೆ ಬಗೆಹರಿಸಲು ವಹಿಸಿದ್ದ ಮುತುರ್ವಜಿಗೆ ಸಚಿವ ಹರ್‌ದೀಪ್ ಸಿಂಗ್ ಇದೇ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಗ್ಗೆ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 3.0 ಸರ್ಕಾರದಲ್ಲಿ ಕೇವಲ 40 ದಿನದಲ್ಲಿ ಜೆಬಿಎಫ್ ಉದ್ಯೋಗಸ್ಥರ ಈ ಜ್ವಲಂತ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರುವುದು ನನಗೆ ಬಹಳ ಸಂತಸ ತಂದಿದೆ. ಈ ವಿಚಾರದಲ್ಲಿ ನಾನು ಕ್ಯಾ. ಚೌಟ ಅವರ ಬದ್ಧತೆ ಮತ್ತು ಪ್ರಯತ್ನವನ್ನು ಪ್ರಶಂಸಿಸುವುದಾಗಿ ತಿಳಿಸಿದ್ದಾರೆ.