ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಂಸದ ಕ್ಯಾ.ಚೌಟ ಭಾಗಿ

Oplus_131072
Oplus_131072
Published on



ಮಂಗಳೂರು : ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 80ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿರುವ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ದೇಶದ ಸುಸ್ಥಿರ ಅಭಿವೃದ್ಧಿಯ ಬಗ್ಗೆ ವಿಷಯ ಮಂಡಿಸಿದ್ದಾರೆ.
ಭಾರತದ ಸರ್ವ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಪಿ.ಪಿ. ಚೌಧರಿ ನೇತೃತ್ವದ ನಿಯೋಗ ನ್ಯೂಯಾರ್ಕ್‌ನಲ್ಲಿ ಅ.14ರವರೆಗೆ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಗವಹಿಸುತ್ತಿದೆ. ಈ ತಂಡದಲ್ಲಿ ಕರ್ನಾಟಕದಿಂದ ಸ್ಥಾನ ಪಡೆದಿರುವ ಸಂಸದ ಕ್ಯಾ.ಚೌಟ ಅವರು ಈಗ ವಿಶ್ವ ವೇದಿಕೆಯಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿ ಕುರಿತಂತೆ ವಿಚಾರ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಅಧಿವೇಶನದಲ್ಲಿ ಕ್ಯಾ. ಚೌಟ ಅವರು 2030ಕ್ಕೆ ಐದು ವರ್ಷಗಳು-ಸುಸ್ಥಿರ ಅಭಿವೃದ್ಧಿಗಾಗಿ ಬಹುಪಕ್ಷೀಯ ಪರಿಹಾರಗಳು ವಿಷಯದ ಮೇಲೆ ಭವಿಷ್ಯ ಭಾರತದ ನಿಲುವನ್ನು ಮಂಡಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಬಹುಪಕ್ಷೀಯ ಸಹಕಾರ ಮತ್ತು ಸಂಪನ್ಮೂಲಗಳ ಸ್ಥಿರತೆ ಅತ್ಯಗತ್ಯ. ಭಾರತವು ಅಭಿವೃದ್ಧಿ ಹೊಂದದ ಮತ್ತು ಭೂ-ಆವೃತ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತನ್ನ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಜಾಗತಿಕ ಸಹಭಾಗಿತ್ವಕ್ಕೆ ಸಹಕಾರದ ಮಹತ್ವವನ್ನು ಭಾರತ ಪ್ರತಿಪಾದಿಸುತ್ತಿರುವುದಾಗಿ ಅವರು ತಿಳಿಸಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರತಿನಿಧಿಯಾಗಿ ವಿಶ್ವ ವೇದಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿರುವುದು ಹೆಮ್ಮೆ ತಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸುವ ಅತ್ಯಂತ ಮಹತ್ತರ ಜವಾಬ್ದಾರಿಯನ್ನು ನನ್ನಂತಹ ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೆ ವಹಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿ ಬಿ.ಎಲ್.ಸಂತೋಷ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ , ಸಂಸದೀಯ ವ್ಯವಹಾರಗಳ ಸಚಿವ
ಕಿರಣ್ ರಿಜುಜಿ ಅವರ ನಿರಂತರ ಮಾರ್ಗದರ್ಶನಕ್ಕೆ ಹಾಗೂ ದ.ಕ.ಜನತೆಗೆ ನಾನು ಅಭಾರಿಯಾಗಿದ್ದೇನೆ ಎಂದು ಕ್ಯಾ. ಚೌಟ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net