

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸಿದ ನಿರಂತರ ಪ್ರತಿಭಟನೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ದೊಡ್ಡ ಗೆಲುವು ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ತಮ್ಮ ರಾಜಕೀಯ ಬದುಕು ಯಾವುದೇ ಕಪ್ಪು ಚುಕ್ಕೆಗಳಿಲ್ಲದ ತೆರೆದ ಪುಸ್ತಕ ಎಂದು ಇಷ್ಟು ದಿನ ಹೇಳಿಕೊಂಡು ತಿರುಗಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ನಿಜ ಬಣ್ಣ ಈಗ ಕೋರ್ಟ್ ತೀರ್ಪಿನಿಂದ ಬಯಲಾಗಿದೆ. ಮೈಸೂರು ಮುಡಾ ಹಗರಣದಲ್ಲಿ ಅಕ್ರಮ ಎಸಗಿರುವುದಕ್ಕೆ ಹೈಕೋಟ್ ನೀಡಿರುವ ಈ ತೀರ್ಪಿಗಿಂತ ದೊಡ್ಡ ಸಾಕ್ಷೃ ಬೇರೆ ಬೇಕಾಗಿಲ್ಲ. ಹಾಗಾಗಿ ಸಿಎಂ ಸ್ಥಾನದಲ್ಲಿ ಮುಂದವರಿಯುವುದಕ್ಕೆ
ಸಿದ್ದರಾಮಯ್ಯ ಅವರಿಗೆ ಇನ್ನು ಯಾವುದೇ ನೈತಿಕತೆಯಿಲ್ಲ. ತಕ್ಷಣ ಕರ್ನಾಟಕದ ಜನತೆ ಹಾಗೂ ಕಾನೂನಿಗೆ ಗೌರವ ಕೊಟ್ಟು ಸಿಎಂ ಸ್ಥಾನದಿಂದ ನಿರ್ಗಮಿಸಬೇಕೆಂದು ಕ್ಯಾ. ಚೌಟ ಆಗ್ರಹಿಸಿದ್ದಾರೆ.
ರಾಜ್ಯಪಾಲರು ಈ ಬಗ್ಗೆ ದೂರು ಬಂದಾಗ ಕಾನೂನು ತಜ್ಞರ ಸಲಹೆ ಪಡೆದು ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಆಗಲೇ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ, ಗಂಭೀರ ತಪ್ಪು ನಡೆಸಿದ ಬಳಿಕವೂ ಅಧಿಕಾರದ ಆಸೆಗೆ ಸಿಎಂ ಖುರ್ಚಿಗೆ ಅಂಟಿಕೊಂಡಿದ್ದಾರೆ. ಆಡಳಿತದಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ಭ್ರಷ್ಟಾಚಾರಕ್ಕೆ ಈಗ ಕಾನೂನು ತಕ್ಕ ಉತ್ತರ ಕೊಟ್ಟಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.