

ಮಂಗಳೂರು : ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಲ್ಲಿ ಭಾರತ ಕಾಂತ್ರಿ ಸೃಷ್ಟಿಸಿದ ದೇಶವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆ ಒಂದು ಕುಟುಂಬವನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ - ಉಚಿತ ವಿದ್ಯುತ್) ಯೋಜನೆಯ ಫಲಾನುಭವಿಗಳಿಗೆ ಸೋಮವಾರ ಸಬ್ಸಿಡಿ ಪತ್ರ ವಿತರಿಸಿ ಮಾತನಾಡಿದ ಅವರು ‘ ಈ ಯೋಜನೆ ಮೂಲಕ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿ ಬಳಸುವುದರ ಜತೆಗೆ ಉಳಿದ ಯುನಿಟ್ ಗಳನ್ನು ಮಾರಾಟ ಮಾಡಬಹುದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮೊದಲು ಒಂದು ಗ್ರಾಮ, ವಾರ್ಡ್ ಅಥವಾ ಬೂತ್ ಮಟ್ಟದಲ್ಲಿ ಮಾದರಿಯಾಗಿ ಅನುಷ್ಟಾನಗೊಳಿಸಬೇಕು. ಸಣ್ಣ- ಸಣ್ಣ ಪ್ರದೇಶದಲ್ಲಿ ಅನುಷ್ಠಾನ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ಮುಂದೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಅನುಕೂಲವಾಗವಹುದು. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಒಂದು ಬೂತ್ ಅಥವಾ ವಾರ್ಡ್‌ನಲ್ಲಿ ಈ ಯೋಜನೆಗಳನ್ನು ಅನುಷ್ಟಾನಗೊಳಿಸಿ ಮಾದರಿಯನ್ನಾಗಿ ರೂಪಿಸುವುದಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದು ಸಂಸದರು ಸಲಹೆ ನೀಡಿದರು.
ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯೆ ವನಿತಾ ಪ್ರಸಾದ್ , ಇನರ್ಜಿ ಸೋಲಾರ್ ಕಂಪನಿಯ ಅರವಿಂದ್ , ಸೂರಜ್ ಶೆಟ್ಟಿ ಉಪಸ್ಥಿತರಿದ್ದರು.